ಕೆ.ಆರ್.ಪುರ: ಮಹಾ ಶಿವರಾತ್ರಿ ಪ್ರಯುಕ್ತ ವೆಂಗಯ್ಯನ ಕೆರೆ ಬಳಿ ಇರುವ ಮಹಾಬಲೇಶ್ವರ ಮತ್ತು ನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.
ಬೆಳಿಗ್ಗೆ 4 ಗಂಟೆಯಿಂದ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕದೊಂದಿಗೆ ಮಹಾ ಶಿವರಾತ್ರಿ ಕಾರ್ಯಕ್ರಮ ಆರಂಭಗೊಂಡಿತು. ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.
ಪ್ರಮುಖ ಆಕರ್ಷಕವಾದ ಗುಹಾಂತರ ದ್ವಾರದ ಹನ್ನೆರಡು ಜ್ಯೋತಿರ್ಲಿಂಗ ದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಜ್ಯೋತಿರ್ಲಿಂಗಗಳು ಆಕರ್ಷಕವಾಗಿ ಕಾಣಲು ಕಣ್ಮನ ಸೆಳೆಯಲು ವಿದ್ಯುತ್ ದ್ವೀಪದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕೆ.ಆರ್.ಪುರ ಸುತ್ತಮುತ್ತಲಿನ ಆನಂದಪುರ, ಮೇಡಹಳ್ಳಿ, ಭಟ್ಟರಹಳ್ಳಿ, ಅವಲಹಳ್ಳಿ, ಬಸವನಪುರ, ಮಹದೇವಪುರ, ದೇವಸಂದ್ರ, ರಾಮಮೂರ್ತಿನಗರ, ಐಟಿಐ ಕಾಲೋನಿ, ಮರಗೊಂಡಹಳ್ಳಿ, ಟಿ.ಸಿ.ಪಾಳ್ಯ ಮುಂತಾದ ಕಡೆಗಳಿಂದ ಬಂದ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.
ಮಹಾ ಶಿವರಾತ್ರಿ ಹಬ್ಬದಂದು ಭಕ್ತರ ಇಷ್ಟಾರ್ಥ ಈಡೇರಲು ವಿಶೇಷ ಪೂಜೆ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆ.ಆರ್.ಪುರ ಗ್ರಾಮಸ್ಥರ ಸಮ್ಮುಖದಲ್ಲಿ ಗುಹಾಂತರ ದ್ವಾರದ ಹನ್ನೆರಡು ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ದೇವಸ್ಥಾನ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.