ಬೆಂಗಳೂರು: ‘ರಾಮಾಯಣ ಮತ್ತು ಮಹಾಭಾರತ ಕಳೆದ ಎರಡು ಸಹಸ್ರಮಾನಗಳಿಂದ ಭಾರತದ ಸಂಸ್ಕೃತಿಯನ್ನು ರೂಪಿಸುವ ಜತಗೆ ಮನಸ್ಸನ್ನು ಸಂಪೂರ್ಣ ಆವರಿಸಿಕೊಂಡಿವೆ’ ಎಂದು ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ತಿಳಿಸಿದರು.
ಕ್ರಿಯಾ ಮಾಧ್ಯಮ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿಗಣೇಶ ದೇವಿ ಅವರ‘ಮಹಾಭಾರತ್: ದಿ ಎಪಿಕ್ ಆ್ಯಂಡ್ ದಿ ನೇಷನ್’ ಕೃತಿಯ ಕನ್ನಡ ಅನುವಾದ‘ಮಹಾಭಾರತ: ಭೂಮಕಾವ್ಯ ಮತ್ತು ಭಾರತ ರಾಷ್ಟ್ರ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.
‘ಒಬ್ಬರನ್ನು ಬೈಯುವಾಗ ಅಥವಾ ಹೊಗಳುವಾಗ ಮಹಾಭಾರತ, ರಾಮಾಯಣದ ಒಂದಲ್ಲ ಒಂದು ಪಾತ್ರವನ್ನು ಬಳಸುತ್ತೇವೆ. ಈ ಕಾವ್ಯಗಳನ್ನು ಬಿಟ್ಟು ಜಗಳ ಅಥವಾ ಪ್ರ್ರೀತಿ ಮಾಡಲು ಸಾಧ್ಯವಿಲ್ಲ. ಇದಕ್ಕೆ ಏನು ಕಾರಣ ಎಂಬ ಚರ್ಚೆಯನ್ನು ಗಣೇಶ ದೇವಿ ಅವರು ಕೃತಿಯಲ್ಲಿ ನಡೆಸಿದ್ದಾರೆ. ಭಾರತದ ಮಹಾಕಾವ್ಯಗಳಷ್ಟು ಜಗತ್ತಿನ ಬೇರೆ ಭಾಷೆಯ ಯಾವುದೇ ಕೃತಿಗಳು ಮನಸ್ಸಿನ ಮೇಲೆ ಪ್ರಭಾವ ಬೀರಿಲ್ಲ’ ಎಂದು ಹೇಳಿದರು.
‘ನಮ್ಮ ಅತ್ಯಂತ ಪ್ರಸಿದ್ಧ ಪ್ರಾಚೀನ ಕೃತಿಗಳು ಪ್ರಶ್ನೆಯಿಂದ ಪ್ರಾರಂಭವಾಗುತ್ತವೆ. ಈ ಕಥನ ತಂತ್ರದಿಂದ ಸಂವಹನದ ಚೌಕಟ್ಟು ಕಟ್ಟಿಕೊಳ್ಳಲು ಹಾಗೂ ಕಥೆ ಎಲ್ಲೆಲ್ಲಿಗೊ ಹೋಗದಂತೆ ನೋಡಿಕೊಳ್ಳಲು ಸಾಧ್ಯ. ಸಾಹಿತ್ಯ ವಿಮರ್ಶೆಯ ಜತೆಗೆ ಚರಿತ್ರೆ, ಇತಿಹಾಸ ಸೇರಿದಂತೆ ಅನೇಕ ಜ್ಞಾನ ಶಿಸ್ತನ್ನು ಆಧರಿಸಿ ಗಣೇಶ ದೇವಿ ಅವರು ಕೃತಿಯನ್ನು ಪ್ರಸ್ತುತಪಡಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನುವಾದಕ ಎಂ.ಜಿ.ಹೆಗಡೆ, ‘ಮಹಾಭಾರತದ ಜಗತ್ತಿನೊಳಗೆ ಹೋಗುವುದು ದೊಡ್ಡ ಪ್ರಯಾಣ. ಕೃತಿಯ ಲೇಖಕರ ಆಶಯದಂತೆ ಕನ್ನಡಕ್ಕೆ ಕೃತಿಯನ್ನು ತರಲಾಗಿದೆ. ವರ್ತಮಾನದಲ್ಲಿ ನಿಂತುಕೊಂಡು ಮಹಾಭಾರತ ನೋಡಲಾಗಿದೆ. ಗಣೇಶ ದೇವಿ ಅವರು ಮಹಾಭಾರತವನ್ನು ಗಂಭೀರವಾಗಿ ಪರಿಗಣಿಸಿ, ಬರೆದಿದ್ದಾರೆ’ ಎಂದರು.
ಪುಸ್ತಕ ಪರಿಚಯ
lಪುಸ್ತಕ: ‘ಮಹಾಭಾರತ: ಭೂಮಕಾವ್ಯ ಮತ್ತು ಭಾರತ ರಾಷ್ಟ್ರ’
lಲೇಖಕ: ಗಣೇಶ ದೇವಿ
lಅನುವಾದಕ:ಎಂ.ಜಿ. ಹೆಗಡೆ
lಪುಟಗಳು: 140
lಬೆಲೆ: ₹130
lಪ್ರಕಾಶನ: ಕ್ರಿಯಾ ಮಾಧ್ಯಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.