ಬೆಂಗಳೂರು: 110 ಹಳ್ಳಿಗಳ ಅಭಿವೃದ್ಧಿ ಯೋಜನೆಯಡಿ ಮಹದೇವಪುರ ವಲಯದಲ್ಲಿ ₹78.32 ಕೋಟಿ ಮೊತ್ತದ ಕಾಮಗಾರಿಯನ್ನು ಟೆಂಡರ್ ಕರೆಯದೆಯೇ ಜಾರಿಗೊಳಿಸುವುದಕ್ಕೆ ಅವಕಾಶ ನೀಡಬೇಕೆಂಬ ಬಿಬಿಎಂಪಿಯ ಕೋರಿಕೆಯನ್ನು ಸರ್ಕಾರ ಪುರಸ್ಕರಿಸಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸಿಯೇ ಕಾಮಗಾರಿ ನಿರ್ವಹಿಸುವಂತೆ ಸರ್ಕಾರ ಆದೇಶ ಮಾಡಿದೆ.
ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ( 31) ಹಳ್ಳಿಗಳಿವೆ. 110 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ₹1 ಸಾವಿರ ಕೋಟಿ ಮಂಜೂರು ಮಾಡಿತ್ತು. ಇದರಲ್ಲಿ ಈ ಕ್ಷೇತ್ರಕ್ಕೆ ₹210 ಕೋಟಿ ಹಂಚಿಕೆ ಮಾಡಿತ್ತು. ಈ ಅನುದಾನದಲ್ಲಿ 114 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿತ್ತು. ಈ ಪೈಕಿ ₹131.68 ಕೋಟಿ ಮೊತ್ತದಲ್ಲಿ 58 ಕಾಮಗಾರಿಗಳನ್ನು ಮಹದೇವಪುರ ವಲಯ ವ್ಯಾಪ್ತಿಯಿಂದ ನಿರ್ವಹಿಸಲು ಸರ್ಕಾರ ಅನುಮತಿ ನೀಡಿತ್ತು.
ಬಾಕಿ 73 ಕಾಮಗಾರಿಗಳನ್ನು ನಿರ್ವಹಿಸಲು ₹78.32 ಕೋಟಿ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಬಿಬಿಎಂಪಿ, ಟೆಂಡರ್ ಆಹ್ವಾನಿಸದೆಯೇ ಕಾಮಗಾರಿ ನಿರ್ವಹಿಸಲು ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ’ಯ 4(ಜಿ) ಸೆಕ್ಷನ್ ಅಡಿ ವಿನಾಯಿತಿ ಕೋರಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಈಗ ₹78.32 ಕೋಟಿ ಬಿಡುಗಡೆ ಮಾಡಿರುವ ಸರ್ಕಾರ, ಟೆಂಡರ್ ಆಹ್ವಾನಿಸಿಯೇ ಕಾಮಗಾರಿ ನಿರ್ವಹಿಸಬೇಕು ಎಂಬ ಷರತ್ತು ವಿಧಿಸಿದೆ. ₹10 ಕೋಟಿಗೂ ಕಡಿಮೆ ಇಲ್ಲದಂತೆ ಪ್ಯಾಕೇಜ್ ರೂಪಿಸಿ ಮುಂದಿನ ಎರಡು ವರ್ಷಗಳಲ್ಲಿ ಹಂತ–ಹಂತವಾಗಿ ಕಾಮಗಾರಿ ನಿರ್ವಹಿಸಬೇಕು. ಕ್ರಿಯಾಯೋಜನೆ ಪಟ್ಟಿಯಲ್ಲಿ ಇಲ್ಲದ ಕಾಮಗಾರಿಗಳನ್ನು ಅನಿವಾರ್ಯವಾಗಿ ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಬೇಕಿದ್ದರೆ ಮುಖ್ಯ ಆಯುಕ್ತರ ಶಿಫಾರಸಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿ ಅವರಿಂದ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.