ಬೆಂಗಳೂರು: ಕಾಡು ಮಲ್ಲೇಶ್ವರ ಬಳಗದ ವತಿಯಿಂದ 12 ವರ್ಷಗಳ ನಂತರ ಕಾಡುಮಲ್ಲಿಕಾರ್ಜುನ ದೇವಾಲಯದ ಮಹಾಕುಂಭ ಅಭಿಷೇಕ ಮತ್ತು ಸಹಸ್ರ ಕಳಶ ಅಭಿಷೇಕ ಮಹೋತ್ಸವ ಕಾರ್ಯಕ್ರಮ ನ. 4ರಿಂದ 7ರ ವರೆಗೆ ಮಲ್ಲೇಶ್ವರದಲ್ಲಿ ನಡೆಯಲಿದೆ.
‘ಕಾಡುಮಲ್ಲಿಕಾರ್ಜುನ ಸ್ವಾಮಿಯ ರಾಜಗೋಪುರ, ವಿಮಾನಗೋಪುರ, ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ದೇವಾಲಯದ ಮಹಾನಂದಿ ರಾಜಗೋಪುರ ಮತ್ತು ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದ ವಿಮಾನ ಗೋಪುರಗಳ ಮಹಾಕುಂಭ ಅಭಿಷೇಕಕ್ಕೆ ಭಾನುವಾರ ಚಾಲನೆ ನೀಡಲಾಗುವುದು’ ಎಂದು ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಗಂಗಾ, ತುಂಗಾ, ಕಾವೇರಿ, ಕುಮಾರಧಾರ, ಘಟಪ್ರಭಾ ಸೇರಿ 30ಕ್ಕೂ ಪವಿತ್ರ ನದಿಗಳ ನೀರನ್ನು ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತದೆ. ಅಂದಾಜು 3 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ದರ್ಶನಕ್ಕೆ ಬರುವ ಎಲ್ಲರಿಗೂ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.
‘ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿ, ಡಾ.ಸಿ.ಎನ್ ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ‘ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.