ADVERTISEMENT

ಪತ್ನಿ ಕೊಂದು ಆತ್ಮಹತ್ಯೆ ಎಂದು ಪೊಲೀಸರ ಮುಂದೆ ಗೋಳಾಡಿ ಅತ್ತಿದ್ದ ಪತಿ ಬಂಧನ!

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಮೃತದೇಹ * ₹ 3 ಲಕ್ಷ ಸುಪಾರಿ ನೀಡಿದ್ದ ಶಿವಶಂಕರ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 3:11 IST
Last Updated 10 ಫೆಬ್ರುವರಿ 2024, 3:11 IST
ಪ್ರೇಮಲತಾ
ಪ್ರೇಮಲತಾ   

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಪ್ರೇಮಲತಾ (35) ಸಾವಿನ ರಹಸ್ಯ ಭೇದಿಸಿರುವ ಪೊಲೀಸರು, ಕೊಲೆ ಆರೋಪದಡಿ ಪತಿ ಶಿವಶಂಕರ್ ಹಾಗೂ ಆತನ ಸ್ನೇಹಿತ ವಿನಯ್‌ನನ್ನು ಬಂಧಿಸಿದ್ದಾರೆ.

‘ಶ್ರೀಕಂಠೇಶ್ವರ ನಗರದ ನಿವಾಸಿ ಪ್ರೇಮಲತಾ ಅವರ ಮೃತದೇಹ ಮನೆಯ ಕಿಟಕಿಗೆ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಫೆ. 5ರಂದು ಪತ್ತೆಯಾಗಿತ್ತು. ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತಿ ಶಿವಶಂಕರ್ ನಾಟಕವಾಡಿದ್ದ. ಮೃತದೇಹ ಸಿಕ್ಕ ಸ್ಥಿತಿ ಬಗ್ಗೆ ಅನುಮಾನ ಇತ್ತು. ತನಿಖೆ ಕೈಗೊಂಡಾಗ ಶಿವಶಂಕರ್‌ ಹಾಗೂ ಸ್ನೇಹಿತ ವಿನಯ್ ಸಿಕ್ಕಿಬಿದ್ದಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇಬ್ಬರೂ ಸೇರಿ ಪ್ರೇಮಲತಾ ಅವರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೊಲೆ ಆರೋಪದಡಿ ಶಿವಶಂಕರ್ ಹಾಗೂ ವಿನಯ್‌ನನ್ನು ಬಂಧಿಸಲಾಗಿದೆ. ಇಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಶೀಲ ಶಂಕೆ, ಪತ್ನಿ ಸಾಯಿಸಲು ವಾಮಾಚಾರ: ‘ಪ್ರೇಮಲತಾ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಶಿವಶಂಕರ್ ಬ್ಯಾಂಕ್‌ವೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರೇಮಲತಾ ಪರ ಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಶಿವಶಂಕರ್‌ಗೆ ಅನುಮಾನ ಬಂದಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

‘ಪತಿ ಮಾತಿಗೆ ಪ್ರೇಮಲತಾ ಕಿವಿಗೊಡುತ್ತಿರಲಿಲ್ಲ. ಪತ್ನಿಯನ್ನು ಸಾಯಿಸಲು ಯೋಚಿಸಿದ್ದ ಆರೋಪಿ ಶಿವಶಂಕರ್, ವಾಮಾಚಾರ ಮಾಡಿಸಿದ್ದ. ಆದರೆ, ಪ್ರೇಮಲತಾ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ’ ಎಂದು ತಿಳಿಸಿದರು.

‘ಪತ್ನಿಯ ಮೇಲೆ ಮತ್ತಷ್ಟು ಅನುಮಾನಗೊಂಡಿದ್ದ ಶಿವಶಂಕರ್, ಮನೆಗೆ ಯಾರೆಲ್ಲ ಬಂದು ಹೋಗುತ್ತಾರೆಂದು ತಿಳಿಯಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದ. ಮೊಬೈಲ್‌ನಲ್ಲಿಯೇ ದೃಶ್ಯಗಳನ್ನು ವೀಕ್ಷಿಸುತ್ತಿದ್ದ’ ಎಂದು ಹೇಳಿದರು.

ಕತ್ತು ಹಿಸುಕಿ ಕೊಲೆ

‘ಸೋಮವಾರ (ಫೆ. 5) ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗಿದ್ದರು. ಮನೆಯಲ್ಲಿದ್ದ ಶಿವಶಂಕರ್, ಸಿ.ಸಿ.ಟಿ.ವಿ ಕ್ಯಾಮೆರಾ ಆಫ್ ಮಾಡಿದ್ದ. ಮನೆಗೆ ಬಂದ ವಿನಯ್, ಪ್ರೇಮಲತಾ ಅವರ ಕತ್ತು ಹಿಸುಕಿ ಕೊಂದಿದ್ದ. ನಂತರ ಇಬ್ಬರೂ ಸೇರಿ ಮೃತದೇಹವನ್ನು ಮನೆಯ ಕಿಟಕಿಗೆ ನೇಣು ಹಾಕಿ, ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಶಾಲೆ ಮುಗಿದ ಮೇಲೆ ಮಕ್ಕಳು ಸಂಜೆ ಮನೆಗೆ ಬಂದಾಗ ಮೃತದೇಹ ನೋಡಿ ಸ್ಥಳೀಯರಿಗೆ ಹೇಳಿದ್ದರು. ಅದೇ ಸಮಯಕ್ಕೆ ಶಿವಶಂಕರ್ ಮನೆಗೆ ವಾಪಸು ಬಂದಿದ್ದ. ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸ್ಥಳೀಯರ ಎದುರು ಗೋಳಾಡಿ ಅತ್ತಿದ್ದ. ಸ್ಥಳಕ್ಕೆ ಬಂದ ಪೊಲೀಸರ ಎದುರು ಆತ್ಮಹತ್ಯೆ ನಾಟಕವಾಡಿದ್ದ’ ಎಂದು ಹೇಳಿದರು.

‘ಕಿಟಕಿ ಎತ್ತರ ಕಡಿಮೆ ಇದೆ. ಇಂಥ ಕಿಟಕಿಗೆ ನೇಣು ಹಾಕಿಕೊಳ್ಳುವುದು ಅಸಾಧ್ಯವೆಂಬುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಮೃತದೇಹವನ್ನು ಗಮನಿಸಿದಾಗ, ಯಾರೋ ಕೊಲೆ ಮಾಡಿದ್ದಾರೆಂಬ ಅನುಮಾನ ಬಂದಿತ್ತು. ತಾಂತ್ರಿಕ ಪುರಾವೆಗಳನ್ನು ಆಧರಿಸಿ ಶಿವಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸತ್ಯಾಂಶ ತಿಳಿಯಿತು’ ಎಂದು ಪೊಲೀಸರು ವಿವರಿಸಿದರು.

ಸ್ನೇಹಿತನಿಗೆ ₹ 3 ಲಕ್ಷ ಸುಪಾರಿ

‘ಆರೋಪಿ ವಿನಯ್ ಹುಣಸಮಾರನಹಳ್ಳಿ ನಿವಾಸಿ. ಈತ ಐದು ವರ್ಷಗಳ ಹಿಂದೆ ಬ್ಯಾಂಕ್ ಕೆಲಸದ ಸಂದರ್ಭದಲ್ಲಿ ಶಿವಶಂಕರ್‌ಗೆ ಪರಿಚಯಗೊಂಡಿದ್ದ. ತನ್ನ ಪತ್ನಿಯ ಸಾವಿನ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವಿನಯ್‌ನ ಅಪರಾಧ ಹಿನ್ನೆಲೆ ಶಿವಶಂಕರ್‌ಗೆ ಗೊತ್ತಿತ್ತು. ವಿನಯ್ ಸಹ ತನ್ನ ಪತ್ನಿಯನ್ನು ಸಾಯಿಸಿದ್ಗು ಹೇಗೆ ಎಂಬುದನ್ನು ಬಿಡಿಸಿ ಹೇಳಿದ್ದ’ ಎಂದು ಪೊಲೀಸರು ತಿಳಿಸಿದರು. ‘ಪ್ರೇಮಲತಾ ಅವರನ್ನು ಕೊಲೆ ಮಾಡುವಂತೆ ವಿನಯ್‌ಗೆ ಹೇಳಿದ್ದ ಶಿವಶಂಕರ್ ₹ 3 ಲಕ್ಷ ಸುಪಾರಿ ನೀಡುವುದಾಗಿ ತಿಳಿಸಿದ್ದ. ‘ನನ್ನೊಬ್ಬನಿಂದ ಕೊಲೆ ಮಾಡುವುದು ಅಸಾಧ್ಯ. ನಿನ್ನ ಸಹಾಯ ಬೇಕು’ ಎಂದು ವಿನಯ್ ಹೇಳಿದ್ದ. ಅದಕ್ಕೆ ಒಪ್ಪಿದ್ದ ಶಿವಶಂಕರ್ ಮುಂಗಡವಾಗಿ ₹40 ಸಾವಿರ ಕೊಟ್ಟಿದ್ದ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.