ಬೆಂಗಳೂರು: ‘ಪರ ಪುರುಷನ ಜೊತೆ ನನ್ನ ಪತ್ನಿ ಸಲುಗೆ ಇಟ್ಟುಕೊಂಡಿದ್ದಾಳೆ. ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಉಪಕರಣದಿಂದ ಈ ಸಂಗತಿ ಗೊತ್ತಾಗಿದ್ದು, ಸಲುಗೆ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಿದ್ದಾಳೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
‘ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ಪತ್ನಿ ಹಾಗೂ ಅವರ ಸ್ನೇಹಿತನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಖಾಸಗಿ ಕಂಪನಿ ಉದ್ಯೋಗಿ ಆಗಿರುವ ದೂರುದಾರರಿಗೆ 2014ರಲ್ಲಿ ಮದುವೆಯಾಗಿದೆ. 6 ವರ್ಷದ ಮಗುಜೊತೆ ದಂಪತಿ ವಾಸವಿದ್ದಾರೆ. ದೂರುದಾರ ರಾತ್ರಿ ಕೆಲಸಕ್ಕೆ ಹೋದರೆ, ಬೆಳಿಗ್ಗೆಯೇ ಮನೆಗೆ ವಾಪಸು ಬರುತ್ತಿದ್ದರು. ಹಗಲಿನಲ್ಲಿ ಮಾತ್ರ ಮನೆಯಲ್ಲಿರುತ್ತಿದ್ದರು’ ಎಂದು ತಿಳಿಸಿವೆ.
‘ವರ್ಷದ ಹಿಂದೆಯಷ್ಟೇ ದೂರುದಾರ ಹೊಸ ಕಾರು ಖರೀದಿಸಿದ್ದರು. ಅದರಲ್ಲಿ ಜಿಪಿಎಸ್ ಉಪಕರಣ ಅಳವಡಿಸಲಾಗಿತ್ತು. ಕಾರು ಎಲ್ಲಿದೆ ಎಂಬುದು ಮೊಬೈಲ್‌ನಲ್ಲಿರುವ ಆ್ಯಪ್ ಮೂಲಕ ತಿಳಿಯುತ್ತಿತ್ತು. ಈ ವಿಷಯ ಪತ್ನಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ದೂರುದಾರ ಎಂದಿನಂತೆ ಕಚೇರಿ ಕೆಲಸಕ್ಕೆ ಹೋಗಿದ್ದರು. ರಾತ್ರಿ ಸ್ನೇಹಿತನನ್ನು ಮನೆಗೆ ಕರೆಸಿದ್ದ ಪತ್ನಿ, ಆತನ ಜೊತೆ ಕಾರಿನಲ್ಲಿ ಹೊರಗಡೆ ಹೋಗಿದ್ದರು.’
‘ವಿಮಾನ ನಿಲ್ದಾಣ ರಸ್ತೆಯ ಲಾಡ್ಜ್ ಹಾಗೂ ಹೋಟೆಲ್ ಎದುರು ಕಾರು ನಿಲುಗಡೆ ಆಗಿತ್ತು. ಈ ಸಂಗತಿ ಜಿಪಿಎಸ್ ಮೂಲಕ ದೂರುದಾರರಿಗೆ ಗೊತ್ತಾಗಿತ್ತು. ಕಚೇರಿ ಕೆಲಸ ಮುಗಿಸಿ ಲಾಡ್ಜ್‌ಗೆ ಹೋಗಿದ್ದ ದೂರುದಾರ, ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದ್ದ. ಪತ್ನಿ– ಸ್ನೇಹಿತ ಇಬ್ಬರೂ ಗುರುತಿನ ಚೀಟಿ ನೀಡಿ ಲಾಡ್ಜ್‌ನ ಕೊಠಡಿಯಲ್ಲಿ ಉಳಿದುಕೊಂಡಿದ್ದ ಸಂಗತಿ ಗೊತ್ತಾಗಿತ್ತು. ಸಿಟ್ಟಾಗಿದ್ದ ದೂರುದಾರ, ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಆದರೆ, ಪತ್ನಿಯೇ ಪತಿಗೆ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.