ADVERTISEMENT

ಮದುವೆ ವಿಚಾರಕ್ಕೆ ಮಹಾಲಕ್ಷ್ಮೀ ಹತ್ಯೆ: ಎರಡು ಮಚ್ಚು ಖರೀದಿಸಿದ್ದ ಆರೋಪಿ

ಮರಣಪತ್ರದಲ್ಲಿ ಕೊಲೆಯ ಬಗ್ಗೆ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 0:51 IST
Last Updated 28 ಸೆಪ್ಟೆಂಬರ್ 2024, 0:51 IST
ಮಹಾಲಕ್ಷ್ಮೀ
ಮಹಾಲಕ್ಷ್ಮೀ   

ಬೆಂಗಳೂರು: ‘ಮದುವೆ ವಿಚಾರದಲ್ಲಿ ನಡೆದಿದ್ದ ಜಗಳದಲ್ಲಿ ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಅವರನ್ನು, ದೇಹ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

ಪ್ರಕರಣದ ಆರೋಪಿ ಮುಕ್ತಿ ರಂಜನ್ ರಾಯ್ ಅವರು ಒಡಿಶಾದ ಧುಸುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮರಣ ಪತ್ರ ಬರೆದಿದ್ದು, ಈ ಕೊಲೆಯ ಬಗ್ಗೆ ಉಲ್ಲೇಖಿಸಿದ್ದಾರೆ.

‘ಸೆಪ್ಟೆಂಬರ್ 3ರಂದೇ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಮರಣಪತ್ರದ ದೃಢೀಕೃತ ಪ್ರತಿಯನ್ನು ಧುಸುರಿ ಠಾಣೆಯ ಪೊಲೀಸರಿಂದ ಪಡೆದ ಬಳಿಕ ಇದು ಗೊತ್ತಾಗಲಿದೆ. ರಾಜ್ಯ ಪೊಲೀಸ್ ಅಧಿಕಾರಿಗಳ ತಂಡ ಆರೋಪಿಯ ಸ್ವಗ್ರಾಮಕ್ಕೆ ತೆರಳಿದ್ದು, ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ADVERTISEMENT

ಆರೋಪಿಯ ತಮ್ಮ ಬೆಂಗಳೂರಿನಲ್ಲಿಯೇ ಇದ್ದು, ನ್ಯಾಯಾಧೀಶರ ಮುಂದೆ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಬೆಂಗಳೂರಿನಲ್ಲಿ 7–8 ವರ್ಷಗಳಿಂದ ವಾಸಿಸುತ್ತಿದ್ದು, ಮಾಲ್‌ವೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ. ಆರೋಪಿಯಿಂದ ಮಹಾಲಕ್ಷ್ಮೀ ಹಣ ವಸೂಲಿ ಮಾಡಿದ್ದರ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ಮಹಾಲಕ್ಷ್ಮೀ ಅವರನ್ನು ಕೊಲೆ ಮಾಡಿದ ಬಳಿಕ ಮುಕ್ತಿ ರಂಜನ್​ ರಾಯ್​, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ ಸ್ವಗ್ರಾಮ ಒಡಿಶಾದ ಭದ್ರಕ್ ಬಳಿಯ ಬೋನಿಪುರಗೆ ತೆರಳಿದ್ದಾನೆ. ದ್ವಿಚಕ್ರ ವಾಹನ ಅಥವಾ ಬಸ್/ರೈಲಿನ ಮೂಲಕ ತೆರಳಿದ್ದಾನೆಯೇ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಪೊಲೀಸರ ದಿಕ್ಕು ತಪ್ಪಿಸಲು ಮಾರ್ಗ ಬದಲಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಊರು ತಲುಪಿದ ಬಳಿಕ ಹೆಬ್ಬಗೋಡಿಯಲ್ಲಿರುವ ತಮ್ಮನಿಗೆ ಕರೆ ಮಾಡಿದ್ದು, ಮಹಾಲಕ್ಷ್ಮೀಯನ್ನು ಕೊಲೆ ಮಾಡರುವ ವಿಷಯ ತಿಳಿಸಿ, ಯಾರಿಗೂ ಈ ವಿಚಾರ ಹೇಳಬೇಡ. ಬೇಗ ಬಾಡಿಗೆ ಕೊಠಡಿಯನ್ನು​ ಖಾಲಿ ಮಾಡು ಎಂದು ಹೇಳಿದ್ದಾನೆ. ಬಳಿಕ ತನ್ನ ತಾಯಿಗೂ ಕೊಲೆ ಮಾಡಿದ ವಿಚಾರವನ್ನು​ ತಿಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.

‘ಮಹಾಲಕ್ಷ್ಮೀ ಮನೆಯಲ್ಲಿ ತಪಾಸಣೆ ವೇಳೆ ಅಂಗಡಿಯೊಂದರ ಬಿಲ್ ಸಿಕ್ಕಿದೆ. ಪೊಲೀಸರು ಅಲ್ಲಿಗೆ ಭೇಟಿ ನೀಡಿ, ವಿಚಾರಿಸಿದಾಗ ಮಾಂಸ ಕತ್ತರಿಸುವ ಎರಡು ಮಚ್ಚುಗಳನ್ನು ಆರೋಪಿ ಖರೀದಿಸಿದ್ದು ಗೊತ್ತಾಗಿದೆ. ಅದರಿಂದಲೇ ಮಹಾಲಕ್ಷ್ಮೀ ಅವರದೇಹವನ್ನು 59 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸಿದ್ದ. ಒಂದೇ ದಿನದಲ್ಲಿ ಕತ್ತರಿಸಿದ್ದನೇ ಅಥವಾ ಎರಡು ದಿನ ತೆಗೆದುಕೊಂಡನೇ ಎಂದು ಸ್ಪಷ್ಟವಾಗಿಲ್ಲ’ ಎಂದರು.

ಬೆಂಗಳೂರು ಪೊಲೀಸರ ತಂಡ ಸದ್ಯ ಮುಕ್ತಿ ರಂಜನ್ ಮನೆಯಲ್ಲೇ ಬೀಡುಬಿಟ್ಟಿದ್ದು, ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ವಿಚಾರಣೆ ನಡೆಸುತ್ತಿದೆ. ಧುಸುರಿ ಠಾಣೆ ಪೊಲೀಸರಿಂದ ಆರೋಪಿಯ ಬೆರಳಚ್ಚು ಮಾದರಿ ಪಡೆದುಕೊಳ್ಳಲಾಗಿದೆ. ಶನಿವಾರ ಅಥವಾ ಭಾನುವಾರ ಈ ತಂಡ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.