ಬೆಂಗಳೂರು:ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕರಿಬ್ಬರ ಮಧ್ಯೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಕಾಲೇಜಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಪ್ರೊ.ಎಸ್.ಮಲ್ಲೇಶ್ವರಪ್ಪ ಅವರು ಗಲಾಟೆ ನಡೆಸಿದ ಇಬ್ಬರು ಪ್ರಾಧ್ಯಾಪಕರನ್ನು ಕರೆಸಿ ವಿವರಣೆ ಪಡೆದದ್ದು ಮಾತ್ರವಲ್ಲದೆ, ಗಲಾಟೆ ನಡೆದ ದಿನದ ಸಭೆಯಲ್ಲಿ ಹಾಜರಿದ್ದ ಅಧ್ಯಾಪಕರನ್ನು ಕರೆಸಿ ವಿಚಾರಣೆ ನಡೆಸಿದರು. ಬಳಿಕ ಆಯುಕ್ತರಿಗೆ ವರದಿ ನೀಡಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಕೆಲವರು ಘಟನೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಏನೂ ಆಗಿಯೇ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಮಾಹಿತಿ ಪಡೆಯುವ ಸಂದರ್ಭದಲ್ಲಿ ಪ್ರಾಂಶುಪಾಲರು ಹಾಜರಿದ್ದ ಕಾರಣ ಎಲ್ಲರೂ ಮುಕ್ತವಾಗಿ ಅಭಿಪ್ರಾಯ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕೆಲವು ಅಧ್ಯಾಪಕರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರೊ.ಎಸ್.ಮಲ್ಲೇಶ್ವರಪ್ಪ, ‘ಎಲ್ಲರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಗಲಾಟೆ ಮಾಡಿಕೊಂಡವರು ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರು ಈ ರೀತಿ ನಡೆಯುವುದು ಶೋಭೆಯಲ್ಲ’ ಎಂದು ಹೇಳಿದರು.
‘ಕ್ಲಸ್ಟರ್ ವಿಶ್ವವಿದ್ಯಾಲಯ ಆಗುವ ಸಂದರ್ಭದಲ್ಲಿ ಈ ಬೆಳವಣಿಗೆ ಒಳ್ಳೆಯದಲ್ಲ. ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರ ಆದಷ್ಟು ಬೇಗ ವಿಶೇಷ ಅಧಿಕಾರಿಯನ್ನು ನೇಮಿಸಬಹುದು ಎಂಬ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.
ಮಾತಿನ ಚಕಮಕಿ ಆಗಿದೆ, ಹೊಡೆದಾಡಿಲ್ಲ’
‘ಮಹಾರಾಣಿ ಕಾಲೇಜಿನಲ್ಲಿ ಇಬ್ಬರು ಪ್ರಾಧ್ಯಾಪಕರ ಮಧ್ಯೆ ಮಾತಿನ ಚಕಮಕಿ ನಡೆಯಿತೇ ಹೊರತು ಕೈ– ಕೈ ಮಿಲಾಯಿಸಿಲ್ಲ. ಆದರೆ, ಇಬ್ಬರೂ ಪ್ರಾಧ್ಯಾಪಕರಿಗೆ ಎಚ್ಚರಿಕೆ ನೀಡಲಾಗಿದ್ದು, ಅವರು ಕ್ಷಮೆ ಕೋರಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಣ್ಣ ತಿಳಿಸಿದ್ದಾರೆ.
‘ಕಾಲೇಜಿನ ಕಂಪ್ಯೂಟರ್ ವಿಭಾಗದ ಇಬ್ಬರು ಪ್ರಾಧ್ಯಾಪಕರ ನಡುವೆ ಹಿಂದಿನಿಂದ ಭಿನ್ನಾಭಿಪ್ರಾಯವಿತ್ತು. ಅವರ ನಡುವಿನ ಕಿತ್ತಾಟಕ್ಕೆ ಪ್ರತಿಷ್ಠೆ ಕಾರಣವೇ ಹೊರತು, ನನ್ನ ಪ್ರೇರಣೆಯಿಂದ ಗಲಭೆ ನಡೆದಿಲ್ಲ’ ಎಂದು ಪ್ರಕಟಣೆಯಲ್ಲಿ ಸಮಜಾಯಿಷಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.