ADVERTISEMENT

ಎಲ್ಲ ಸಮುದಾಯದ ಅಸಹಾಯಕರಿಗೆ ನೆರವಾಗಿ: ಸಚಿವ ಕೆ.ಎನ್. ರಾಜಣ್ಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:33 IST
Last Updated 12 ನವೆಂಬರ್ 2024, 16:33 IST
ಕೆ.ಎನ್. ರಾಜಣ್ಣ
ಕೆ.ಎನ್. ರಾಜಣ್ಣ   

ಯಲಹಂಕ: ಕೇವಲ ಜಾತಿಯ ನಾಯಕರಾಗದೇ ಎಲ್ಲ ಸಮುದಾಯಗಳಲ್ಲಿರುವ ಬಡವರು ಮತ್ತು ಅಸಹಾಯಕ ಜನರ ನಾಯಕರಾಗಿ, ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನನಾಯಕರಾಗಿ ಹೊರಹೊಮ್ಮಬೇಕು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಭಿಪ್ರಾಯಪಟ್ಟರು.

ರೈಲುಗಾಲಿ ಕಾರ್ಖಾನೆಯ ಮಹರ್ಷಿ ವಾಲ್ಮೀಕಿ ನಾಯಕ ನೌಕರರ ಸಂಘದ ಆಶ್ರಯದಲ್ಲಿ ರೈಲ್ವೆ ನೌಕರರ ಮನರಂಜನಾ ಕೇಂದ್ರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯಗಳಲ್ಲಿಯೂ ಅಸಹಾಯಕ ಮತ್ತು ಬಡಜನರಿದ್ದಾರೆ. ಜನಾಂಗದ ಜನರ ಶ್ರೇಯೋಭಿವೃದ್ಧಿಗಾಗಿ ಮತ್ತು ಬಡಜನರ ಪರವಾದ ನ್ಯಾಯಯುತ ಹೋರಾಟಕ್ಕೆ ಎಲ್ಲರೂ ಒಟ್ಟಾಗಿ ಕೈಜೋಡಿಸಿದಾಗ ಸಫಲತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ADVERTISEMENT

‘ಭಾರತದಲ್ಲಿ ಹಲವು ರಾಮಾಯಣಗಳಿವೆ. ಇವುಗಳಲ್ಲಿ ವಾಲ್ಮೀಕಿ ರಾಮಾಯಣ ಶ್ರೇಷ್ಠ ಗ್ರಂಥವಾಗಿದೆ. ಇದನ್ನು ರಚಿಸುವ ಮೂಲಕ ಇಡೀ ಜಗತ್ತಿಗೆ ರಾಮಾಯಣ ಪರಿಚಯಿಸಿದ ಕೀರ್ತಿ ವಾಲ್ಮೀಕಿಯವರಿಗೆ ಸಲ್ಲುತ್ತದೆ’ ಎಂದು ಬಣ್ಣಿಸಿದರು.

ವಾಲ್ಮೀಕಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಸಂಜಯಕುಮಾರನಂದ ಸ್ವಾಮೀಜಿ, ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಶ್ರೀರಾಮ್‌.ಎಂ, ಗೌರವಾಧ್ಯಕ್ಷ ಎಸ್‌.ರಮೇಶ್‌, ಪ್ರಧಾನ ಕಾರ್ಯದರ್ಶಿ ಗುಂಡಗತ್ತಿ ನಾಗರಾಜ್‌, ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ಡಾ.ನಂಜುಂಡ ಸ್ವಾಮಿ, ರೈಲ್ವೆ ಕಾರ್ಯಾಗಾರದ ಹಿರಿಯ ಎಂಜಿನಿಯರ್‌ ಎಂ.ಆರ್‌.ಚಂದ್ರಶೇಖರ್‌, ರೈಲುಗಾಲಿ ಕಾರ್ಖಾನೆಯ ಉಪ ಮುಖ್ಯ ಯಾಂತ್ರಿಕ ಎಂಜಿನಿಯರ್‌ ಕೆ.ಮೋಹನ್‌ಕುಮಾರ್‌, ರೈಲ್ವೆ ನೌಕರರ ಸಂಘದ ಅಖಿಲ ಭಾರತ ಪರಿಶಿಷ್ಟ ಜಾತಿ-ಪಂಗಡಗಳ ಕಾರ್ಯದರ್ಶಿ ಎಂ.ಸುರೇಶ್‌ ಬಾಬು, ಕಾರ್ಖಾನೆಯ ಸಿಬ್ಬಂದಿ ಪರಿಷತ್‌ ಸದಸ್ಯ ಯು.ವಿಜಯಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.