ADVERTISEMENT

‘ಜೈನ ಸಾಧುಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ’: ಅಖಿಲ ಭಾರತ ಜೈನ್‌ ಯೂಥ್‌ ಫೆಡರೇಷನ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 20:33 IST
Last Updated 12 ಜುಲೈ 2023, 20:33 IST
ಮಹೇಂದ್ರ ಸಿಂಘಿ ಅವರು ಥಾವರಚಂದ್‌ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದರು. ಮಹಾವೀರ್ ಲಿಂಬ್ ಸೆಂಟರ್‌ನ ಪದಾಧಿಕಾರಿಗಳು ಇದ್ದಾರೆ.
ಮಹೇಂದ್ರ ಸಿಂಘಿ ಅವರು ಥಾವರಚಂದ್‌ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದರು. ಮಹಾವೀರ್ ಲಿಂಬ್ ಸೆಂಟರ್‌ನ ಪದಾಧಿಕಾರಿಗಳು ಇದ್ದಾರೆ.   

ಬೆಂಗಳೂರು: ‘ಜೈನ ಸಾಧು, ಸಂತರು ಕಾಲು ನಡಿಗೆಯಲ್ಲಿ ವಿಹಾರ ಕೈಗೊಂಡಾಗ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು’ ಎಂದು  ಅಖಿಲ ಭಾರತ ಜೈನ್‌ ಯೂಥ್‌ ಫೆಡರೇಷನ್‌ನ ಮಹಾವೀರ್ ಲಿಂಬ್ ಸೆಂಟರ್ ಆಗ್ರಹಿಸಿದೆ. 

ಈ ಬಗ್ಗೆ ಸೆಂಟರ್‌ನ ಪದಾಧಿಕಾರಿಗಳು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. 

‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಕಾಮಕುಮಾರ ನಂದಿ ಮಹರಾಜರ ಹತ್ಯೆಯನ್ನು ಜೈನ ಸಮಾಜವು ಬಲವಾಗಿ ಖಂಡಿಸುತ್ತದೆ. ಈ ಘಟನೆಯಿಂದ ನಮ್ಮ ಸಮಾಜವು ಅಸುರಕ್ಷತೆಯಿಂದ ಭಯಭೀತವಾಗಿದೆ. ಸರ್ವರ ಹಿತವನ್ನು ಬಯಸುವ, ಶಾಂತಿ, ಅಹಿಂಸೆ, ಪ್ರೇಮದ ಭಾವನೆಯನ್ನು ನಾಡಿಗೆ ಸಾರುತ್ತಿರುವ ಜೈನ ಸಮಾಜದ ಮೇಲೆ, ಸಾಧುಗಳ ಮೇಲೆ ನಡೆದಿರುವ ಈ ಆಕ್ರಮಣ ಖಂಡನೀಯ. ದೇಶ ವಿದೇಶದಲ್ಲಿರುವ ಜೈನ ಸಮುದಾಯವು ಸಾಧು, ಸಾಧ್ವಿಗಳ ಅಭದ್ರತೆಯ ಕುರಿತು ಭಯದಿಂದ ತತ್ತರಿಸಿದೆ’ ಎಂದು ಕೇಂದ್ರದ ಅಧ್ಯಕ್ಷ ಮಹೇಂದ್ರ ಸಿಂಘಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜೈನ ಸಾಧುಗಳ ವಿಹಾರ ಸಂದರ್ಭದಲ್ಲಿ ಅವರ ವಾಸ್ತವ್ಯಕ್ಕಾಗಿ ರಾತ್ರಿ ತಂಗಲು ಶಾಲೆ–ಕಾಲೇಜು ಅಥವಾ ಸರ್ಕಾರಿ ಪ್ರವಾಸಿ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಜೈನ ತೀರ್ಥ ಸ್ಥಳಗಳು, ಮಂದಿರಗಳ ಮೇಲೆ ನಡೆಯುವ ಅತಿಕ್ರಮಣ ದಬ್ಬಾಳಿಕೆಗಳನ್ನು ತಡೆಯಬೇಕು. ಜೈನ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ಜೈನ ಅಲ್ಪ ಸಂಖ್ಯಾತರ ಅಭಿವೃದ್ಧಿ ಮಂಡಳಿಯನ್ನು ರಚಿಸಲು ಸರ್ಕಾರಕ್ಕೆ ಸೂಚನೆ ನೀಡಬೇಕು’ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.