ADVERTISEMENT

ಮೆಜೆಸ್ಟಿಕ್‌ ‘ಅಕ್ರಮ’ ವ್ಯಾಪಾರ: ಪ್ರಶ್ನಿಸಿದರೆ ಇರಿತ

ಚಾಕು– ಚೂರಿ ತೋರಿಸಿ ಕೊಲೆ ಬೆದರಿಕೆ: ಹೆಚ್ಚುತ್ತಿರುವ ದೂರು l ಪಾಲನೆಯಾಗದ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 21:04 IST
Last Updated 30 ಡಿಸೆಂಬರ್ 2022, 21:04 IST
ಮೆಜೆಸ್ಟಿಕ್ ಸುರಂಗ ಮಾರ್ಗದಲ್ಲಿ ಅಕ್ರಮವಾಗಿ ಮಳಿಗೆ ತೆರೆದಿರುವ ವ್ಯಾಪಾರಿಗಳು  – ಪ್ರಜಾವಾಣಿ ಚಿತ್ರ
ಮೆಜೆಸ್ಟಿಕ್ ಸುರಂಗ ಮಾರ್ಗದಲ್ಲಿ ಅಕ್ರಮವಾಗಿ ಮಳಿಗೆ ತೆರೆದಿರುವ ವ್ಯಾಪಾರಿಗಳು  – ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೆಜೆಸ್ಟಿಕ್‌ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ಸುರಂಗ ಮಾರ್ಗದಲ್ಲಿ ‘ಅಕ್ರಮ’ ವ್ಯಾಪಾರ ಜೋರಾಗಿದ್ದು, ಇದನ್ನು ಪ್ರಶ್ನಿಸುವ ಜನರ ಮೇಲೆ ವ್ಯಾಪಾರಿಗಳು ಹಲ್ಲೆ ಮಾಡುತ್ತಿದ್ದಾರೆ. ತಮ್ಮದೇ ಗುಂಪು ಕಟ್ಟಿಕೊಂಡು ಚಾಕು– ಚೂರಿ ತೋರಿಸಿ ಕೊಲೆ ಬೆದರಿಕೆಯೊಡ್ಡುತ್ತಿರುವ ದೂರುಗಳು ಹೆಚ್ಚಾಗಿವೆ.

ನಿಲ್ದಾಣಕ್ಕೆ ಬಂದು ಹೋಗುವ ಜನರ ಸಂಚಾರಕ್ಕೆ ಅನುಕೂಲವಾಗಲೆಂದು ಸುರಂಗ ಮಾರ್ಗ ನಿರ್ಮಿಸಲಾಗಿದ್ದು, ‘ಕಡ್ಡಾಯವಾಗಿ ಸುರಂಗ ಮಾರ್ಗ ಬಳಸಿ’ ಎಂಬ ನಾಮಫಲಕಗಳನ್ನು ನೇತುಹಾಕಲಾಗಿದೆ. ಆದರೆ, ಜನರು ಓಡಾಡುವ ಸ್ಥಳವನ್ನೇ ಅತಿಕ್ರಮಿಸಿಕೊಂಡುವ್ಯಾಪಾರಿಗಳು ವಹಿವಾಟು ನಡೆಸು ತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಹಲವು ವರ್ಷಗಳಿಂದ ನಡೆಯುತ್ತಿದ್ದ ಅಕ್ರಮ ವ್ಯಾಪಾರ ಪ್ರಶ್ನಿಸಿ ರವಿಕುಮಾರ್‌ ಕಂಚನಹಳ್ಳಿ ಎಂಬುವವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಮೆಜೆಸ್ಟಿಕ್‌ನ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಬಿಬಿಎಂಪಿಗೆ ಸೂಚಿಸಿ 2019ರ ಆಗಸ್ಟ್‌ 27ರಂದು ಆದೇಶ ಹೊರಡಿಸಿತ್ತು. ಎಚ್ಚೆತ್ತ ಬಿಬಿಬಿಎಂಪಿ ಅಧಿಕಾರಿಗಳು, ಅನಧಿಕೃತ ಅಂಗಡಿಗಳನ್ನು ತೆರವು ಮಾಡಿದ್ದರು.

ADVERTISEMENT

ಕೆಲ ದಿನ ಸುಮ್ಮನಾಗಿದ್ದ ವ್ಯಾಪಾರಿಗಳು, ಕೋವಿಡ್ ಲಾಕ್‌ಡೌನ್‌ ನಂತರ ಪುನಃ ಸುರಂಗ ಮಾರ್ಗದಲ್ಲಿ ಅಕ್ರಮ ವ್ಯಾಪಾರ ಶುರು ಮಾಡಿದ್ದಾರೆ.

ಜನಸಂದಣಿ ಪ್ರದೇಶ: ‘ಬೆಂಗಳೂರಿಗೆ ಬರುವ ಬಹುತೇಕರು ಮೆಜೆಸ್ಟಿಕ್‌ಗೆ ಬಂದು ಹೋಗುತ್ತಾರೆ. ಈ ಪ್ರದೇಶದಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಸುರಂಗ ಮಾರ್ಗ ಹಾಗೂ ಸುತ್ತಮುತ್ತ 400ಕ್ಕೂ ಹೆಚ್ಚು ವ್ಯಾಪಾರಿಗಳು ಅಕ್ರಮವಾಗಿ ಮಳಿಗೆಗಳನ್ನು ತೆರೆದಿದ್ದಾರೆ’ ಎಂದು ಬಸ್ ಪ್ರಯಾಣಿಕ ರಮೇಶ್ ಹೇಳಿದರು.

‘ಹೂವು, ಹಣ್ಣು, ಆಟಿಕೆ, ಬಟ್ಟೆ, ಮೊಬೈಲ್ ಬಿಡಿ ಭಾಗ... ಹೀಗೆ ಹಲವು ವಸ್ತುಗಳನ್ನು ವ್ಯಾಪಾರಿಗಳು ಮಾರುತ್ತಿದ್ದಾರೆ. ದುಬಾರಿ ಬೆಲೆ ನಿಗದಿಪಡಿಸುವ ವ್ಯಾಪಾರಿಗಳು, ಅವುಗಳ ಮಾರಾಟಕ್ಕಾಗಿ ಗ್ರಾಹಕರ ಜೊತೆ ಜಗಳಕ್ಕೂ ಇಳಿಯುತ್ತಿದ್ದಾರೆ.
ಅಕ್ರಮ ವ್ಯಾಪಾರ ಪ್ರಶ್ನಿಸುವ ಸಾರ್ವಜನಿಕರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಘಟನೆಗಳು ನಡೆಯುತ್ತಿವೆ’ ಎಂದು ಅವರು ಆರೋಪಿಸಿದರು.

ಕಣ್ಮುಚ್ಚಿ ಕುಳಿತ ಹಿರಿಯ ಅಧಿಕಾರಿಗಳು: ‘ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿರುವ ಸುರಂಗ ಮಾರ್ಗದಲ್ಲಿ ಅಕ್ರಮ ವ್ಯಾಪಾರ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಬಸ್‌ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಜನಸಾಮಾನ್ಯರು ನಿತ್ಯವೂ ಸುರಂಗ ಮಾರ್ಗ ಬಳಸುತ್ತಿದ್ದು, ಭಯದಲ್ಲೇ ಸಂಚರಿಸುವಂತಾಗಿದೆ. ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು, ಒಂದು ದಿನ ಸುರಂಗ ಮಾರ್ಗದಲ್ಲಿ ಸಂಚರಿಸಿದರೆ ಜನಸಾಮಾನ್ಯರ ಕಷ್ಟ ಅರ್ಥವಾಗುತ್ತದೆ’ ಎಂದು ಕಿಡಿಕಾಡಿದರು.

‘ಕೊಳೆತ ಹಣ್ಣು: ವಕೀಲರ ಮೇಲೆ ಹಲ್ಲೆ’

ಸುರಂಗ ಮಾರ್ಗದಲ್ಲಿ ಕೊಳೆತ ಹಣ್ಣು ಮಾರಿದ್ದ ವ್ಯಾಪಾರಿಗಳು, ಅದನ್ನು ಪ್ರಶ್ನಿಸಿದ್ದಕ್ಕೆ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘35 ವರ್ಷದ ವಕೀಲರೊಬ್ಬರು ದೂರು ನೀಡಿದ್ದಾರೆ. ಹಲ್ಲೆ, ಕೊಲೆ ಬೆದರಿಕೆ ಆರೋಪದಡಿ ಮೂವರು ವ್ಯಾಪಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಡಿ. 23ರಂದು ಊರಿಗೆ ಹೋಗಲು ಸುರಂಗ ಮಾರ್ಗದ ಮೂಲಕ ಬಸ್ ನಿಲ್ದಾಣದತ್ತ ಹೊರಟಿದ್ದೆ. ₹ 100 ಕೊಟ್ಟು ಹಣ್ಣು ಖರೀದಿಸಲು ಮುಂದಾಗಿದ್ದೆ. ಹಣ್ಣುಗಳನ್ನು ಕೈಯಲ್ಲಿ ಹಿಡಿದು ನೋಡಿದಾಗ ಕೊಳೆತಿದ್ದವು. ಹೀಗಾಗಿ, ಹಣ್ಣು ಬೇಡವೆಂದು ಹೇಳಿದ್ದೆ. ಅಷ್ಟಕ್ಕೆ ಗುಂಪು ಕಟ್ಟಿಕೊಂಡು ಬಂದ ವ್ಯಾಪಾರಿಗಳು, ನನ್ನ ಮೇಲೆ ಹಲ್ಲೆ ಮಾಡಿದರು. ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿದರು’ ಎಂದೂ ದೂರಿನಲ್ಲಿ ಹೇಳಿದ್ದಾರೆ.

‘ಅಡ್ಡಗಟ್ಟಿ ಸುಲಿಗೆ’

‘ಸುರಂಗ ಮಾರ್ಗದಲ್ಲಿ ಸಂಚರಿಸುವ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುವವರೂ ಹೆಚ್ಚಾಗಿದ್ದಾರೆ. ದೂರದ ಊರುಗಳಿಂದ ಬರುವ ಜನರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ. ಇಂಥ ಸುಲಿಗೆ ಕೃತ್ಯಗಳಿಗೂ ಕಡಿವಾಣ ಬಿದ್ದಿಲ್ಲ’ ಎಂದು ಸಾರ್ವಜನಿಕರು ದೂರಿದರು.

‘ಅಧಿಕಾರಿಗಳು, ಪೊಲೀಸರ ಕುಮ್ಮಕ್ಕು’

ಸುರಂಗ ಮಾರ್ಗದಲ್ಲಿ ಅಕ್ರಮ ವ್ಯಾಪಾರ ತಡೆಯುವ ಜವಾಬ್ದಾರಿಯನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ವಹಿಸಲಾಗಿದೆ. ಆದರೆ, ಕೆಲ ಅಧಿಕಾರಿಗಳು ಹಾಗೂ ಕೆಲ ಪೊಲೀಸರ ಕುಮ್ಮಕ್ಕಿನಿಂದ ಅಕ್ರಮ ವ್ಯಾಪಾರ ನಡೆಯುತ್ತಿರುವ ದೂರುಗಳಿವೆ.

‘ದಿನಕ್ಕೆ ₹ 100ರಿಂದ ₹ 500 ಮಾಮೂಲಿ ನಿಗದಿಪಡಿಸಲಾಗಿದೆ. ನಿತ್ಯವೂ ಕೆಲ ಅಧಿಕಾರಿಗಳು ಹಾಗೂ ಕೆಲ ಪೊಲೀಸರು, ಮಾಮೂಲಿ ಪಡೆದುಕೊಂಡು ಹೋಗುತ್ತಿದ್ದಾರೆ. ಇವರ ಲಂಚಗುಳಿತನದಿಂದ ವ್ಯಾಪಾರಿಗಳು ದರ್ಪ ಮೆರೆಯುತ್ತಿದ್ದಾರೆ’ ಎಂಬುದು ಸಾರ್ವಜನಿರ ಆರೋಪ.

‘ಬಿಬಿಎಂಪಿ ವ್ಯಾಪಾರಿಗಳು ಹಾಗೂ ಪೊಲೀಸರಿಗೆ ನಿತ್ಯವೂ ಮಾಮೂಲಿ ನೀಡುತ್ತೇವೆ. ಅವರೇ ನಮಗೆ ಕಾವಲು. ನಾವು ಯಾರಿಗೂ ಹೆದರುವುದಿಲ್ಲ’ ಎಂದು ವ್ಯಾಪಾರಿಗಳು ರಾಜಾರೋಷವಾಗಿ ಹೇಳುತ್ತಾರೆ. ವ್ಯಾಪಾರಿಗಳ ವರ್ತನೆ ಬಗ್ಗೆ ಕೆಲ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ, ಪೊಲೀಸರು ಕೈ ಬಿಸಿ ಮಾಡಿಕೊಂಡು ವ್ಯಾಪಾರಿಗಳ ಪರ ನಿಲ್ಲುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.