ADVERTISEMENT

ಗವಿಗಂಗಾಧರನಿಗೆ ರವಿಕಿರಣದ ಆರತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 19:58 IST
Last Updated 15 ಜನವರಿ 2019, 19:58 IST
ಗವಿಗಂಗಾಧರೇಶ್ವರ ದೇವಸ್ಥಾನದ ಕಿಟಕಿ ಮೂಲಕ ಪ್ರವೇಶಿಸಿದ ಸೂರ್ಯಕಿರಣ, ಶಿವಲಿಂಗದ ಮೇಲೆ ಬಿದ್ದ ಬೆಳಕು ಹಾಗೂ ಮಂಗಳಾರತಿಯ ನೋಟ - –ಪ್ರಜಾವಾಣಿ ಚಿತ್ರ
ಗವಿಗಂಗಾಧರೇಶ್ವರ ದೇವಸ್ಥಾನದ ಕಿಟಕಿ ಮೂಲಕ ಪ್ರವೇಶಿಸಿದ ಸೂರ್ಯಕಿರಣ, ಶಿವಲಿಂಗದ ಮೇಲೆ ಬಿದ್ದ ಬೆಳಕು ಹಾಗೂ ಮಂಗಳಾರತಿಯ ನೋಟ - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಸವನಗುಡಿಯ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಸಂಜೆ ವೇಳೆ ಸೂರ್ಯಕಿರಣಗಳು ಶಿವಲಿಂಗ ಸ್ಪರ್ಶಿಸಿದವು.

ದಕ್ಷಿಣ ಭಾಗದ ಕಿಟಕಿಯ ಮೂಲಕ ಪ್ರವೇಶಿಸಿದ ನೇಸರನ ಕಿರಣಗಳು ಗರ್ಭಗುಡಿಯ ಮುಂಭಾಗದ ನಂದಿಯ ಶಿರಭಾಗದ ಮೂಲಕ ಹಾದುಹೋಗಿ ಶಿವಲಿಂಗವನ್ನು ಬೆಳಗಿದವು. ಬೆಳಕಿನ ಸ್ಪರ್ಶವು ಲಿಂಗಕ್ಕೆ ನಿಸರ್ಗ ಸಹಜ ಮಂಗಳಾರತಿ ಬೆಳಗಿದಂತೆ ಕಾಣಿಸಿತು. ಇಲ್ಲಿ ಶಿವಲಿಂಗವು ದಕ್ಷಿಣಾಭಿಮುಖವಾಗಿದೆ. ಸಾವಿರಾರು ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಿಸುವ ಕ್ಷಣದಲ್ಲಿ ನಡೆದ ಈ ವಿದ್ಯಮಾನವನ್ನು ಭಕ್ತರು, ‘ಶಿವಲಿಂಗಕ್ಕೆ ಸೂರ್ಯ ನಮಸ್ಕಾರ’, ‘ಸೂರ್ಯ– ಶಿವನ ಮುಖಾಮುಖಿ...’ ಎಂದು ಬಣ್ಣಿಸಿದರು.

ಬೆಳಕಿನ ಸ್ಪರ್ಶದ ನಂತರ ವಿಶೇಷ ಅಭಿಷೇಕ, ಮಂಗಳಾರತಿಗಳು ನಡೆದವು. ‘ಪ್ರತಿ ವರ್ಷ ಈ ವಿದ್ಯಮಾನ ನಡೆಯುತ್ತದೆ. ದೇವಸ್ಥಾನದಲ್ಲಿ ಭಕ್ತಿಯ ಸಮಾವೇಶ ನಡೆಯುತ್ತದೆ’ ಎಂದು ಇಲ್ಲಿಗೆ ಬಂದಿದ್ದ ರಾಮಮೋಹನ ಎಂಬುವರು ಹೇಳಿದರು.

ADVERTISEMENT

ಸೂರ್ಯರಶ್ಮಿಯ ಸ್ಪರ್ಶವನ್ನು ಅಪಾರ ಸಂಖ್ಯೆಯ ಭಕ್ತರು ಬೃಹತ್‌ ಪರದೆಗಳ ಮೂಲಕ ವೀಕ್ಷಿಸಿದರು. ನೂಕು ನುಗ್ಗಲು ತಡೆಯಲು ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು.

ಕ್ಷೇತ್ರ ವಿಶೇಷ: ಗೌತಮ ಮಹರ್ಷಿ ಈ ಗುಹಾಂತರ ದೇವಾಲಯದಲ್ಲಿ ತಪಸ್ಸು ಮಾಡಿದ್ದರು ಎಂಬ ಐತಿಹ್ಯ ಇದೆ. ಹೀಗಾಗಿ ಇದಕ್ಕೆ ಗೌತಮ ಕ್ಷೇತ್ರ ಎಂಬ ಹೆಸರೂ ಇದೆ. ದೇವಾಲಯದ ಗರ್ಭಗುಡಿಯ ಸುತ್ತಲಿನ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿ, ಭಾರದ್ವಾಜ ಮಹರ್ಷಿ, ಸಪ್ತ ಮಾತೃಕೆಯರಾದ ಬ್ರಾಹ್ಮೀ, ಮಾಹೇಶ್ವರಿ, ವಾರಾಹಿ, ಚಾಮುಂಡಿ, ವೈಷ್ಣವಿ, ಶ್ರೀದೇವಿ, ಭೂದೇವಿಯ ವಿಗ್ರಹಗಳು ಇವೆ. ಮಾಗಡಿ ಕೆಂಪೇಗೌಡರ ಕಾಲದಲ್ಲಿ ದೇವಸ್ಥಾನ ಜೀರ್ಣೋದ್ಧಾರವಾಯಿತು ಎಂಬ ಇತಿಹಾಸವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.