ಬೆಂಗಳೂರು: ‘ಸಮಾಜದಲ್ಲಿರುವ ಸೌಹಾರ್ದವನ್ನು ಸರ್ಕಾರಗಳೇ ಕೆಡಿಸುತ್ತಿವೆ’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಶನಿವಾರ ಅಭಿಪ್ರಾಯಪಟ್ಟರು.
ಸೌಹಾರ್ದ ಕರ್ನಾಟಕ ಆಯೋಜಿಸಿದ್ದ ‘ಸೌಹಾರ್ದತೆ–ವೈವಿಧ್ಯತೆ’ ರಾಜ್ಯಮಟ್ಟದ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ‘ಹಿಂದೆ ಗಲಾಟೆಗಳು ಆಗುತ್ತಿರಲಿಲ್ಲ ಎಂದಲ್ಲ. ಆದರೆ, ಗಲಾಟೆಯಾದ ನಂತರ ಸಮಾಜ ಸರಿಯಾಗುತ್ತಿತ್ತು. ಈಗ ಸರಿಯಾಗದ ಮಟ್ಟಿಗೆ ಸೌಹಾರ್ದ ಹಾಳಾಗಿದೆ. ಸರ್ಕಾರವೇ ಕೋಮುವಾದಿಯಾದಾಗ ಸೌಹಾರ್ದ ಉಳಿಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಉತ್ತರಪ್ರದೇಶದಲ್ಲಿ ಜಾತ್ರೆ ನಡೆಯುವಾಗ ಹಿಂದೂ, ಮುಸ್ಲಿಮರೆಲ್ಲ ಅಂಗಡಿ, ಹೋಟೆಲ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಜಾತ್ರೆಯಲ್ಲಿ ಹಿಂದೂಗಳಷ್ಟೇ ಆಹಾರ ವ್ಯಾಪಾರ ಮಾಡಬೇಕು ಎಂದು ಅಲ್ಲಿನ ಸರ್ಕಾರವೇ ಸುತ್ತೋಲೆ ಹೊರಡಿಸಿದೆ. ಹಿಂದೂಗಳ ಜಾತ್ರೆಯಲ್ಲಿ, ದೇವಸ್ಥಾನದ ಬಳಿ ಇನ್ನೊಬ್ಬರಿಗೆ ಸಹಾಯ ಮಾಡಿ ಎಂದು ಎಲ್ಲ ಧರ್ಮಗಳು ಹೇಳುತ್ತವೆ. ಇನ್ನೊಬ್ಬರ ಅನ್ನ ಕಸಿದುಕೊಳ್ಳಿ ಎಂದು ಯಾವ ಧರ್ಮವೂ ಹೇಳುವುದಿಲ್ಲ. ಆದರೆ ಇಲ್ಲಿ ಅನ್ನ ಕಸಿಯುವ ಕೆಲಸ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
‘ಬುಲ್ಡೋಜರ್ ನ್ಯಾಯದ ಹೆಸರಲ್ಲಿ ಹಲವು ಮನೆ, ಅಂಗಡಿಗಳ ನೆಲಸಮವಾಗಿದೆ. ಕಾನೂನಿನಲ್ಲಿ ಅವಕಾಶವೇ ಇಲ್ಲದ ಈ ಕೃತ್ಯ ಹತ್ತು ವರ್ಷಗಳಿಂದ ನಡೆಯುತ್ತಿದ್ದರೂ ಕೋರ್ಟ್‌ಗಳು ಸುಮ್ಮನಿದ್ದವು. ಈಗ ಸುಪ್ರೀಂ ಕೋರ್ಟ್ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ’ ಎಂದರು.
‘ದೇಶದಲ್ಲಿ ಕಡಿಮೆ ಪ್ರಜಾಪ್ರಭುತ್ವ, ಹೆಚ್ಚು ನಿರಂಕುಶ ಅಧಿಕಾರವಿದೆ. ಸಂಪತ್ತು ಕೆಲವೇ ಜನರ ಕೈ ಸೇರುವಂತೆ ಅಧಿಕಾರದಲ್ಲಿರುವವರು ತೀರ್ಮಾನಿಸಿದರೂ ದೇಶದ ಬಡ ಜನರು, ಮತ್ತೆ ಶ್ರೀಮಂತರ ಪರ ಇರುವವರನ್ನೇ ಆಯ್ಕೆ ಮಾಡುತ್ತಿದ್ದಾರೆ. ಧರ್ಮದ ಹೆಸರಲ್ಲಿ ಉಣಿಸಿದ ವಿಷಕಾರಿ ಮದ್ದು ಅದಕ್ಕೆ ಕಾರಣ’ ಎಂದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯ್‌ಕುಮಾರ್ ಸಿಂಗ್ ಮಾತನಾಡಿ, ‘ವೈವಿಧ್ಯಗಳ ನಡುವೆ ಹೊಂದಾಣಿಕೆ ನಾಶವಾದಾಗ ಜೀವ ಮತ್ತು ಜೀವನಕ್ಕೆ ಅಪಾಯ ಉಂಟಾಗಲಿದೆ. ಸಮಾಜದಲ್ಲಿ ಹೊಂದಾಣಿಕೆಯೇ ಸೌಹಾರ್ದ. ಸೌಹಾರ್ದವಿಲ್ಲದೇ ಶಾಂತಿ ನೆಲೆಸದು. ಶಾಂತಿ ಇಲ್ಲದೇ ವಿಕಾಸ ಸಾಧ್ಯವಾಗದು. ಹಾಗಾಗಿ ಸೌಹಾರ್ದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವವರೆಲ್ಲ ದೇಶಪ್ರೇಮಿಗಳು’ ಎಂದು ವಿಶ್ಲೇಷಿಸಿದರು.
‘ಒಂದು ಜಾತಿ ಮಾಡಿಬಿಡಿ...’ ‘
ಒಂದು ದೇಶ ಒಂದು ಚುನಾವಣೆ’ ಮಾಡಲು ಹೊರಟಿದ್ದೀರಿ. ಒಂದು ದೇಶ ಒಂದು ಭಾಷೆ ಮಾಡಲೂ ಹುನ್ನಾರ ಮಾಡಿದ್ದೀರಿ. ಅದರ ಜೊತೆಗೆ ‘ಒಂದು ದೇಶ ಒಂದು ಜಾತಿ’ ಮಾಡಿಬಿಡಿ’ ಎಂದೂ ಮೂಡ್ನಾಕೂಡು ಚಿನ್ನಸ್ವಾಮಿ ಕೋರಿದರು. ಇದು ಜಾತಿಯಿಂದ ಬೇಯುವ ಸಮಾಜ. ಇಲ್ಲಿ ಅನೇಕ ಗೋಡೆಗಳಿವೆ. ಅದು ಹೋಗಲು ಎಲ್ಲರೂ ಒಂದೇ ಜಾತಿ ಎಂದು ಮಾಡಬೇಕು. ಜೊತೆಗೆ ಭಾರತೀಯ ಎಂದರೆ ಹಿಂದೂ ಎಂದು ಅಪಾಯಕಾರಿಯಾಗಿ ಸಮೀಕರಿಸುವುದನ್ನು ನಿಲ್ಲಿಸಬೇಕು. ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಸಿಖ್ ಜೈನ ಸೇರಿ ಇಲ್ಲಿನ ಎಲ್ಲರೂ ಭಾರತೀಯರೇ ಆಗಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.