ಬೆಂಗಳೂರು: ಮಣ್ಣಿನ ಮಡಿಕೆಗಳಿಗೆ ಬೇಡಿಕೆ ತಗ್ಗಿರುವ ಇಂದಿನ ದಿನಗಳಲ್ಲಿ ಕುಂಬಾರ ರಾಮಪ್ಪ, ಕೃಷಿ ಮೇಳದ ಬಯಲಿನಲ್ಲೇ ಮಡಿಕೆ ತಯಾರಿಸಿ ಜನರ ಗಮನ ಸೆಳೆದರು
ಮೇಳದ ಪ್ರಮುಖ ರಸ್ತೆಯ ಬದಿಯಲ್ಲಿ ಪತ್ನಿ ಹಾಗೂ ಮಗನ ಜೊತೆ ಸೇರಿ ರಾಮಪ್ಪ ಮಡಿಕೆ ಮಾರುತ್ತಿದ್ದಾರೆ. ಜನರ ಎದುರೇ ಮಣ್ಣಿನ ಮಡಿಕೆ ತಯಾರಿಸಿ, ತಮ್ಮ ಮಡಿಕೆ ಖರೀದಿಸುವಂತೆ ಕೋರುತ್ತಿದ್ದಾರೆ.
ಚಕ್ರದ ಗಾಲಿ ತಿರುಗಿಸಿ, ಹದವಾದ ಮಣ್ಣಿನಿಂದ ಮಡಿಕೆ ತಯಾರಿಸುತ್ತಿದ್ದ ದೃಶ್ಯ ಜನರನ್ನು ಕುತೂಹಲದಿಂದ ನೋಡುವಂತೆ ಮಾಡಿತು. ಮಡಿಕೆ ತಯಾರಿಕೆಯಲ್ಲಿ ಪಾಲ್ಗೊಳ್ಳಲು ಜನರಿಗೂ ಅವಕಾಶ ನೀಡಲಾಗಿತ್ತು.
ಮಕ್ಕಳು ಹಾಗೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಕ್ರದ ಬಳಿ ಹೋಗಿ ಮಡಿಕೆ ತಯಾರಿಸಲು ಕೈ ಜೋಡಿಸಿದರು. ಚಕ್ರ ಸುತ್ತುತ್ತಿದ್ದಾಗಲೇ ಮಡಿಕೆಯನ್ನು ಸುಂದರ ಆಕೃತಿಗೆ ಪರಿವರ್ತಿಸಿದರು. ಕೆಲವರು ಮಡಿಕೆಯನ್ನು ಖರೀದಿಸಿಕೊಂಡು ಹೋದರು.
‘ಇಂದಿನ ದಿನಗಳಲ್ಲಿ ಮಣ್ಣಿನ ಮಡಿಕೆ ಬಳಕೆ ತೀರಾ ಕಡಿಮೆ ಆಗಿದೆ. ಕುಲಕಸುಬು ನಂಬಿರುವ ನಮ್ಮಂಥ ಕುಂಬಾರರ ಜೀವನ ಕಷ್ಟವಾಗಿದೆ. ಇದನ್ನು ಜನರಿಗೆ ತಿಳಿಸಲು ಬಯಲಲ್ಲಿ ಮಡಿಕೆ ತಯಾರಿಸಿ, ಮಾರುತ್ತಿದ್ದೇನೆ’ ಎಂದು ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.