ಬೆಂಗಳೂರು: ನಗರದ ದೀಪಾಂಜಲಿನಗರ ಸಮೀಪದ ರೈಲ್ವೆ ಹಳಿಯ ಮೇಲೆ ಗುರುವಾರ ಬೆಳಿಗ್ಗೆ ಯುವಕನ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ ಚನ್ನಬಸು ಅಶೋಕ್ ಯಳಮೇಲಿ (22) ಅವರ ಮೃತದೇಹ ಎಂದು ಗುರುತಿಸಲಾಗಿದೆ. ಜೇಬಿನಲ್ಲಿ ಪತ್ತೆಯಾದ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಆಧರಿಸಿ ಗುರುತು ಪತ್ತೆ ಮಾಡಲಾಗಿದೆ.
‘ಅಶೋಕ್ ಅವರು ಐದು ತಿಂಗಳ ಹಿಂದೆ ನರ್ಸಿಂಗ್ ಕೋರ್ಸ್ ಮುಗಿಸಿದ್ದರು. ಅದಾದ ಮೇಲೆ ಎರಡು ತಿಂಗಳಿಂದ ಊರಿನಲ್ಲೇ ಇದ್ದರು. ನರ್ಸಿಂಗ್ ಕೆಲಸ ಸಿಕ್ಕಿದ ಮೇಲೆ 15 ದಿನಗಳ ಹಿಂದಷ್ಟೇ ನಗರಕ್ಕೆ ಬಂದು, ಮಾಗಡಿ ರಸ್ತೆಯಲ್ಲಿರುವ ಚೋಳರಪಾಳ್ಯದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ನಿತ್ಯವು ದೀಪಾಂಜಲಿನಗರದ ಮೆಟ್ರೊ ನಿಲ್ದಾಣಕ್ಕೆ ಬಂದು ಮೆಟ್ರೊ ಮೂಲಕ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದರು’ ಎಂದು ರೈಲ್ವೆ ಪೊಲೀಸರು ತಿಳಿಸಿದರು.
‘ಎಂದಿನಂತೆಯೇ ಬುಧವಾರ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಸಂಜೆ ಮನೆಗೆ ಬರುವುದಿಲ್ಲ. ಸ್ನೇಹಿತರ ಮನೆಗೆ ಹೋಗುವುದಾಗಿ ಚಿಕ್ಕಮ್ಮನಿಗೆ ತಿಳಿಸಿದ್ದರು. ರಾತ್ರಿ ಚಿಕ್ಕಮ್ಮ, ಅಶೋಕ್ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬರುತ್ತಿತ್ತು’ ಎಂದು ಮೂಲಗಳು ಹೇಳಿವೆ.
‘ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಹಳಿಯ ಮೇಲೆ ಬ್ಯಾಗ್‌ವೊಂದು ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದರು. ಬುಧವಾರ ಯಾವ ಸ್ಥಳಕ್ಕೆ ತೆರಳಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.