ADVERTISEMENT

‘ಸಂಪಿಗೆ ರಸ್ತೆ’ಯ ಹೂವು ಮಾರುಕಟ್ಟೆಗಿಲ್ಲ ಕಂಪು

ಎಂಟು ವರ್ಷ ಕಳೆದರೂ ಪೂರ್ಣಗೊಳ್ಳದ ಬಹುಮಹಡಿ ಕಟ್ಟಡದ ಕಾಮಗಾರಿ, ಬೀದಿಬದಿಯಲ್ಲೇ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 23:41 IST
Last Updated 26 ಜುಲೈ 2023, 23:41 IST
ಮಲ್ಲೇಶ್ವರದ ಸಂಪಿಗೆ ರಸ್ತೆಬದಿಯಲ್ಲೇ ನಡೆಯುತ್ತಿರುವ ಹೂವಿನ ಮಾರುಕಟ್ಟೆ.
ಮಲ್ಲೇಶ್ವರದ ಸಂಪಿಗೆ ರಸ್ತೆಬದಿಯಲ್ಲೇ ನಡೆಯುತ್ತಿರುವ ಹೂವಿನ ಮಾರುಕಟ್ಟೆ.   

–ಆದಿತ್ಯ ಕೆ.ಎ.

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯ ಬದಿಯಲ್ಲಿ ಬಗೆಬಗೆಯ ಹೂವಿನ ರಾಶಿಯು ನಿತ್ಯವೂ ಪಾದಚಾರಿಗಳು, ವಾಹನ ಸವಾರರು ಹಾಗೂ ಖರೀದಿದಾರರ ಕಣ್ಮನ ಸೆಳೆಯುತ್ತದೆ. ಈ ರಸ್ತೆಯಲ್ಲಿ ಹೂವುಗಳು ಕಂಪು ಬೀರಿದರೂ ವ್ಯಾಪಾರಸ್ಥರ ಬದುಕು ಮಾತ್ರ ಸುಂದರವಾಗಿಲ್ಲ. ಅವರ ಬದುಕು ಬೀದಿಗೆ ಬಿದ್ದಿದೆ.

ಮಲ್ಲೇಶ್ವರದ 12 ಹಾಗೂ 13ನೇ ಕ್ರಾಸ್‌ನ ರಸ್ತೆ ಬದಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುವವರ ಸಮಸ್ಯೆಗಳಿಗೆ ಕಿವಿಯಾದರೆ ಅವರ ಸಂಕಷ್ಟಗಳು ಅನಾವರಣಗೊಳ್ಳುತ್ತವೆ. ಬಣ್ಣ ಬಣ್ಣದ ಹಾಗೂ ವಿವಿಧ ತಳಿಯ ಹೂವುಗಳು ಬಂದರೂ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಇಲ್ಲವಾಗಿದೆ.

ADVERTISEMENT

ರಸ್ತೆ ಬದಿಯಲ್ಲೇ 50ಕ್ಕೂ ಹೆಚ್ಚು ಮಂದಿ ವ್ಯಾಪಾರ ನಡೆಸುತ್ತಿದ್ದು, ಕನಿಷ್ಠ ಸೌಲಭ್ಯಗಳು ಮಾರುಕಟ್ಟೆಯಲ್ಲಿ ಇಲ್ಲದೇ ತಪ್ಪಿಸುತ್ತಿದ್ದಾರೆ. ಅದೇ ಮಾರ್ಗದಲ್ಲಿ ಜನ ಪ್ರತಿನಿಧಿಗಳು, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳೂ ಸಾಗಿದರೂ ವ್ಯಾಪಾರಸ್ಥರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

100ಕ್ಕೂ ಹೆಚ್ಚು ವ್ಯಾಪಾರಸ್ಥರು ರಸ್ತೆಬದಿಯ ಹಳೇ ಕಟ್ಟಡದಲ್ಲಿ 60 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದರು. ಅವರಿಗೆ ಬಹುಮಹಡಿ ಕಟ್ಟಡ ನಿರ್ಮಿಸಿಕೊಡುವ ಭರವಸೆ ಮೇಲೆ ಅಲ್ಲಿಂದ ತೆರವುಗೊಳಿಸಲಾಗಿತ್ತು. ಅದರ ಪಕ್ಕವೇ 87 ತಾತ್ಕಾಲಿಕ ಶೆಡ್‌ಗಳನ್ನು ₹ 1.35 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಎರಡು ವರ್ಷದ ಒಳಗೆ ಬಹುಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸುವುದಾಗಿ, 2015ರಲ್ಲಿ ಕಾಮಗಾರಿ ಆರಂಭಿಸಿದ್ದ ಬಿಡಿಎ, 8 ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಏನೆಲ್ಲಾ ಲಭಿಸುತ್ತಿವೆ?: ಬಿಡಿ ಹೂವು, ಕಟ್ಟಿದ ಹಾರ, ಬಾಳೆಯ ಎಲೆ, ತರಕಾರಿ, ಮಾವಿನ ಸೊಪ್ಪು, ಎಲೆ–ಅಡಿಕೆ, ಪೂಜಾ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳು ಇಲ್ಲಿ ಲಭಿಸುತ್ತಿವೆ. ಮಲ್ಲೇಶ್ವರ ಸೇರಿದಂತೆ ಸುತ್ತಮುತ್ತ ಬಡಾವಣೆಗಳಿಗೆ ಪ್ರಸಿದ್ಧಿಯಾಗಿದ್ದ ಹೂವಿನ ಮಾರುಕಟ್ಟೆ ಈಗ ಸೊರಗಿದೆ.

ಮಳೆ ಬಂದರೆ ಕೆಸರು ವಾತಾವರಣ ನಿರ್ಮಾಣವಾಗಲಿದೆ. ಅಲ್ಲದೇ ಸೊಳ್ಳೆ ಕಾಟವೂ ವಿಪರೀತವಾಗಿದೆ. ಸೊಳ್ಳೆ ಕಾಟದಿಂದ ಸಂಜೆ 5 ಗಂಟೆಗೆ ಬಾಗಿಲು ಬಂದ್ ಮಾಡುವ ಸ್ಥಿತಿಯಿದೆ. ರಾಜಕಾಲುವೆ ಮೇಲೆ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗಿದ್ದು, ದುರ್ವಾಸನೆ ನಡುವೆ ವ್ಯಾಪಾರ ನಡೆಸುತ್ತಿದ್ದಾರೆ.

ರಸ್ತೆಬದಿಯಲ್ಲಿ ತಾತ್ಕಾಲಿಕ ಮಳಿಗೆ ಇರುವ ಕಾರಣಕ್ಕೆ ಗ್ರಾಹಕರು ಅಪಾಯದಲ್ಲಿ ಹೂವು–ಹಣ್ಣು ಖರೀದಿಸುತ್ತಿದ್ದಾರೆ. ಒಂದು ವೇಳೆ ವಾಹನಗಳ ಬ್ರೇಕ್‌ ವಿಫಲವಾದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ರಸ್ತೆಯಿಂದ ಸ್ವಲ್ಪ ಹಿಂಭಾಗದಲ್ಲಿ ನಿರ್ಮಿಸಿರುವ ಮಳಿಗೆಗಳಿಗೆ ಗ್ರಾಹಕರ ಕೊರತೆಯಿದ್ದು ಬಂದ್‌ ಆಗಿವೆ. ಅಲ್ಲಿಗೆ ರಾತ್ರಿವೇಳೆ ಪುಂಡರು ಬಂದು ಗಾಂಜಾ ಹಾಗೂ ಮದ್ಯ ಸೇವಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.     

‘ಹೂವಿನ ವ್ಯಾಪಾರದಲ್ಲಿ ಲಾಭ ಕಡಿಮೆ. ಹೂವುಗಳು ಬಾಡುತ್ತವೆ. ಮರುದಿವಸ ಮಾರಾಟ ನಡೆಸುವುದು ಕಷ್ಟ. ಜತೆಗೆ, ಮಾರುಕಟ್ಟೆ ಸಮಸ್ಯೆ ಬೇರೆ. ಇಷ್ಟೊಂದು ಕಷ್ಟ ಬೇಡವೆಂದು ಹಲವರು ಬೇರೆ ವೃತ್ತಿಗೆ ಹೋಗಿದ್ದಾರೆ’ ಎಂದು ಮಾರಾಟಗಾರ ರಾಮೋಜಿರಾವ್‌ ಹೇಳಿದರು

ಹುಸಿಯಾದ ಭರವಸೆ: ಹಿಂದಿನ ಸರ್ಕಾರ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಆರ್‌.ವಿಶ್ವನಾಥ್‌ ಅವರು ಡಿಸೆಂಬರ್‌ ಒಳಗೆ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅವರ ಹೇಳಿಕೆ ಗಡುವು ಮುಗಿದು ಏಳು ತಿಂಗಳು ಕಳೆದಿದೆ. ಆದರೆ, ಶೇ 50ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಕಾಂಗ್ರೆಸ್ ಸರ್ಕಾರವಾದರೂ ನಮ್ಮ ಬೇಡಿಕೆ ಈಡೇರಿಸಲಿ ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು. 

ಮಾರುಕಟ್ಟೆ ಅವ್ಯವಸ್ಥೆ ಕುರಿತು ಗಮನ ಸೆಳೆಯಲು ಕ್ಷೇತ್ರದ ಶಾಸಕ ಸಿ.ಎನ್‌.ಅಶ್ವತ್ಥ ನಾರಾಯಣ್‌ ಅವರನ್ನು ಸಂಪರ್ಕಿಸಿದರೂ ಅವರು ಪ್ರತಿಕ್ರಿಯಿಗೆ ಲಭ್ಯವಾಗಲಿಲ್ಲ.

ಕಾಮಗಾರಿ ಪೂರ್ಣಗೊಳಿಸಿ ಮಳಿಗೆಗಳನ್ನು ಹಸ್ತಾಂತರಿಸುವಂತೆ ಬಿಡಿಎ ಹಾಗೂ ಬಿಬಿಎಂಪಿ ಕಚೇರಿಗೆ ಅಲೆದು ಸಾಕಾಗಿದೆ. ಮಾರುಕಟ್ಟೆ ಬಳಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವಂತೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಮನ್ನಣೆ ಸಿಕ್ಕಿಲ್ಲ. ಸುಭದ್ರ ಕಟ್ಟಡ ತೆರವುಗೊಳಿಸಿ ವ್ಯಾಪಾರಿಗಳನ್ನು ಬೀದಿಗೆ ತಳ್ಳಿಬಿಟ್ಟಿರು.
ಲಕ್ಷ್ಮಣ್‌, ಅಧ್ಯಕ್ಷ, ಹೂವು ಹಾಗೂ ಹಣ್ಣಿನ ವ್ಯಾಪಾರಿಗಳ ಸಂಘ
ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ನೀರು ಮಳಿಗೆ ಸೇರುತ್ತಿತ್ತು. ಸ್ವಂತ ಖರ್ಚಿನಲ್ಲಿ ನೀರು ಒಳ ಪ್ರವೇಶಿಸದಂತೆ ಕಟ್ಟೆ ನಿರ್ಮಿಸಿಕೊಂಡಿದ್ದೇವೆ. ರಸ್ತೆಯ ದೂಳು ಅಂಗಡಿಯ ಒಳಕ್ಕೇ ಬರುತ್ತದೆ. ಮಧ್ಯಾಹ್ನ ಊಟ ಮಾಡುವುದಕ್ಕೂ ತೊಂದರೆಯಾಗಿದೆ.
ರಾಮೋಜಿರಾವ್‌
ತಾತ್ಕಾಲಿಕ ಶೆಡ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಮನೆಯಿಂದಲೇ ಬ್ಯಾಟರಿ ಚಾರ್ಜ್‌ ಮಾಡಿಕೊಂಡು ಬರುತ್ತೇವೆ. ಆಕಸ್ಮಿಕವಾಗಿ ಬ್ಯಾಟರಿಯನ್ನು ರಾತ್ರಿ ಬಿಟ್ಟು ಹೋದರೆ ಅವುಗಳು ಕಳ್ಳರ ಪಾಲಾಗಿರುತ್ತವೆ.
ಮುನಿರತ್ನಮ್ಮ
ಹೂವಿನ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದೇವೆ. ಆದಷ್ಟು ಬೇಗನೇ ಬಹುಮಹಡಿ ಕಟ್ಟಡ ನಿರ್ಮಿಸಿಕೊಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಅವರಿಗೆ ಶೌಚಾಲಯ ನಿರ್ಮಿಸಿಕೊಟ್ಟಿಲ್ಲ. ದೂರದ ಬಿಜೆಪಿ ಕಚೇರಿ ಬಳಿಯಿರುವ ಶೌಚಾಲಯಕ್ಕೆ ತೆರಳಬೇಕು. ಅಲ್ಲಿಗೆ ಹೋಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಆ ವೇಳೆ ಹತ್ತಾರು ಗ್ರಾಹಕರು ಬಂದು ಹೋಗಿರುತ್ತಾರೆ. ಇತ್ತ ವ್ಯಾಪಾರವೂ ನಷ್ಟವಾಗುತ್ತಿದೆ.
ಕಲಾ
ನಿರ್ಮಾಣ ಹಂತದ ಕಟ್ಟಡದಲ್ಲಿ ಕಿರಿದಾದ ಮಳಿಗೆ ನಿರ್ಮಿಸಲಾಗುತ್ತಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ವಿಸ್ತೀರ್ಣ ದೊಡ್ಡದು ಮಾಡಬೇಕು.
ಸುನಿಲ್‌

ಬಹುಮಹಡಿ ಕಟ್ಟಡದಲ್ಲಿ ಏನಿರಲಿದೆ?

* ಕಟ್ಟಡದ ಎರಡು ನೆಲಮಹಡಿಗಳಲ್ಲಿ ಸಾರ್ವಜನಿಕ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

* ಮೊದಲ ಮಹಡಿಯಲ್ಲಿ ಹೂವು-ಹಣ್ಣು ವ್ಯಾಪಾರಿಗಳಿಗೆ 181 ಮಳಿಗೆ ನಿರ್ಮಿಸಲು ತೀರ್ಮಾನಿಸಲಾಗಿದೆ.

* 2ರಿಂದ 4ನೇ ಮಹಡಿವರೆಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

* ಮೊದಲ ಮಹಡಿಯಿಂದ ನಾಲ್ಕನೇ ಮಹಡಿವರೆಗೆ ನಿರ್ಮಾಣವಾಗಲಿರುವ ಮಳಿಗೆಗಳು ಬಿಡಿಎಗೆ ಸೇರಿರುತ್ತವೆ.‌ ಇವುಗಳನ್ನು ಬಾಡಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ಮಾಲ್‌ಗಳಿಗೆ ಅಥವಾ ಇತರ ವಾಣಿಜ್ಯ ಚಟುವಟಿಕೆಗಳಿಗೆ ನೀಡಲು ಬಿಡಿಎ ಉದ್ದೇಶಿಸಿದೆ.

ಹೂವಿಗೂ ಕಳ್ಳರ ಕಾಟ
‘ತಾತ್ಕಾಲಿಕ ಮಳಿಗೆಗಳಿಗೆ ಬಾಗಿಲು ನಿರ್ಮಿಸಿಲ್ಲ. ರಾತ್ರಿ ವೇಳೆ ಕಳ್ಳರು ಹೂವು ಹಾಗೂ ಬ್ಯಾಟರಿ ಕಳವು ಮಾಡಿ ಪರಾರಿ ಆಗುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಆದರೆ, ಕಳ್ಳರು ಪತ್ತೆಯಾಗುತ್ತಿಲ್ಲ. ಈಗ ಸ್ವಲ್ಪ ದೂರದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಹೂವು ವ್ಯಾಪಾರಸ್ಥರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.