ಬೆಂಗಳೂರು: ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಕಾಡು ಮಲ್ಲೇಶ್ವರ ಬಳಗದಿಂದ ನವೆಂಬರ್ 15ರಿಂದ 18ರವರೆಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ 200ನೇ ಹುಣ್ಣಿಮೆ ಹಾಡು ಹಾಗೂ ಎಂಟನೇ ವರ್ಷದ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ‘ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿಯನ್ನು ಪರಿಚಯಿಸಲು ಕಾರ್ತಿಕ ಮಾಸದಲ್ಲಿ ನಾಲ್ಕು ದಿನ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗುತ್ತಿದೆ. ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ರೈತರು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ. 400ಕ್ಕೂ ಹೆಚ್ಚು ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 8 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.
ನ. 15ರಂದು ಸಂಜೆ 4.30ಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಹುಣ್ಣಿಮೆ ಹಾಡು–200 ಕಾರ್ಯಕ್ರಮದಲ್ಲಿ ‘ಹರಿದಾಸ–ಶಿವಶರಣ ಸಂಗಮ ಸಂಗೀತ’ ಕಾರ್ಯಕ್ರಮದಲ್ಲಿ ಗಾಯಕರಾದ ರವೀಂದ್ರ ಸೊರಗಾಂವಿ, ಸಾಯಿತೇಜಸ್ ಚಂದ್ರಶೇಖರ್ ಅವರು ವಚನ ಗಾಯನ–ದಾಸರ ಪದಗಳ ಗಾಯನ ಪ್ರಸ್ತುತಿಪಡಿಸಲಿದ್ದಾರೆ’ ಎಂದರು.
‘ನ. 16ರಂದು ಸಂಜೆ 6.30ಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ತಂಡದಿಂದ ‘ಹಾಡು ಮಲ್ಲೇಶ್ವರ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ನ. 17ರಂದು ಬೆಳಿಗ್ಗೆ 11ಕ್ಕೆ ಮಧು ಮನೋಹರನ್ ಮತ್ತು ಕಾರ್ತೀಕ್ ಪಾಂಡವಪುರ ತಂಡದಿಂದ ‘ಅಪರೂಪದ ಭಾವಗೀತೆಗಳ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಜೆ 6.30ಕ್ಕೆ ಸೃಷ್ಠಿ ನಿರಂತರ ಮತ್ತು ತಂಡದವರು ಡಾ.ರಾಜ್ ನೆನಪಿನಲ್ಲಿ’ ವಿಶೇಷ ಸಂಗೀತ ಕಛೇರಿ ನೀಡಲಿದ್ದಾರೆ. ನ. 18ರಂದು ಸಂಜೆ 4.30ಕ್ಕೆ ಕಾಡು ಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿಯಿಂದ ಅಭಿಷೇಕ ನಡೆಯಲಿದ್ದು, ಸಂಜೆ 6ಕ್ಕೆ ಫಯಾಜ್‌ಖಾನ್ ಅವರಿಂದ ಸಾರಂಗಿ ವಾದನ ನಡೆಯಲಿದೆ’ ಎಂದರು.
ಕಾಡು ಮಲ್ಲೇಶ್ವರ ಬಳಗದ ಅನೂಪ್ ಅಯ್ಯಂಗಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.