ADVERTISEMENT

ಮಮತಾ ಸಾಗರ್‌ಗೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
<div class="paragraphs"><p>ನೈಜೀರಿಯಾದ ಅಬುಜ ನಗರದಲ್ಲಿ ಆಯೋಜಿಸಿದ್ದ ಏಳನೇ ಅಂತರರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ‘ಜಾಗತಿಕ ಸಾಹಿತ್ಯ ಪ್ರಶಸ್ತಿ‘ ಸ್ವೀಕರಿಸಿ ಮಾತನಾಡಿದ ಕವಯಿತ್ರಿ ಮಮತಾ ಜಿ. ಸಾಗರ್ (ಬಲದಿಂದ ಮೊದಲನೆಯವರು)</p></div>

ನೈಜೀರಿಯಾದ ಅಬುಜ ನಗರದಲ್ಲಿ ಆಯೋಜಿಸಿದ್ದ ಏಳನೇ ಅಂತರರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ‘ಜಾಗತಿಕ ಸಾಹಿತ್ಯ ಪ್ರಶಸ್ತಿ‘ ಸ್ವೀಕರಿಸಿ ಮಾತನಾಡಿದ ಕವಯಿತ್ರಿ ಮಮತಾ ಜಿ. ಸಾಗರ್ (ಬಲದಿಂದ ಮೊದಲನೆಯವರು)

   

ಬೆಂಗಳೂರು: ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡಮಾಡುವ ‘ಜಾಗತಿಕ ಸಾಹಿತ್ಯ ಪ್ರಶಸ್ತಿ‘ಗೆ ಕನ್ನಡದ ಕವಯಿತ್ರಿ ಮಮತಾ ಜಿ. ಸಾಗರ್ ಭಾಜನರಾಗಿದ್ದಾರೆ.

ಜಾಗತಿಕ ಬರಹಗಾರರ ಒಕ್ಕೂಟ (ಡಬ್ಲ್ಯುಒಡಬ್ಲ್ಯು) ಏಪ್ರಿಲ್ 6ರಂದು ನೈಜೀರಿಯಾದ ಅಬುಜ ನಗರದಲ್ಲಿ ಆಯೋಜಿಸಿದ್ದ ಏಳನೇ ಅಂತರರಾಷ್ಟ್ರೀಯ ಸಾಹಿತ್ಯೋತ್ಸವ ದಲ್ಲಿ ಮಮತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಪ್ಯಾನ್ ಆಫ್ರಿಕಲ್ ಕಂಟ್ರೀಸ್‌ ಅಸೋಸಿಯೇಶನ್ ಆಫ್ ರೈಟರ್ಸ್, ಅಸೆಂಬ್ಲಿ ಆಫ್ ಯುರೇಷಿಯನ್ ಪೀಪಲ್ಸ್, ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದವು.

ಮಾನವೀಯತೆಯ ಬುನಾದಿಯ ಮೇಲೆ ಸಂಸ್ಕೃತಿ, ಸಾಹಿತ್ಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಸ್ಥಾಪಿಸಿ, ಶಾಂತಿ ಹಾಗೂ ಸೌಹಾರ್ದ ಬಯಸುವ ಜಗತ್ತಿನ ಬರಹಗಾರರ ಕ್ರಿಯಾಶೀಲ ಪ್ರಯತ್ನಗಳನ್ನು ಕಲೆ ಹಾಕುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಗೌರವಿಸುವುದಕ್ಕಾಗಿ ಡಬ್ಲ್ಯು.ಒ.ಡಬ್ಲ್ಯು ಸಂಘಟನೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ‘ ಸ್ಥಾಪಿಸಿದೆ. ಕನ್ನಡದ ಸಾಹಿತಿಯೊಬ್ಬರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷವಾಗಿದೆ.

ಮಮತಾ ಜಿ. ಸಾಗರ ಅವರು, ಕನ್ನಡದ ಕವಿ, ಭಾಷಾಂತರಕಾರರು, ನಾಟಕಕಾರರಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪದವಿ ಪಡೆದು, ಬೆಂಗಳೂರು ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಒಂಬತ್ತು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಮಣಿಪಾಲ್ ವಿ.ವಿಯ ಸೃಷ್ಟಿ ಸಂಸ್ಥೆಯಲ್ಲಿ ಪ್ರಾಧ್ಯಾಪಕ ರಾಗಿ, ಸೃಜನಾತ್ಮಕ ಬರವಣಿಗೆ ಅಧ್ಯಯನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮುಖ್ಯಮಂತ್ರಿ ಅಭಿನಂದನೆ: ಜಾಗತಿಕ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ಮಮತಾ ಸಾಗರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.