ಬೆಂಗಳೂರು: ವಾಹನ ತಪಾಸಣೆ ನೆಪದಲ್ಲಿ ಕಾರು ಅಡ್ಡಗಟ್ಟಿದ್ದ ಸಂಚಾರ ವಿಭಾಗದ ಮೂವರು ಕಾನ್‌ಸ್ಟೆಬಲ್‌ಗಳು, ‘ಡ್ರಿಂಕ್ ಆ್ಯಂಡ್ ಡ್ರೈವ್’ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹5,000 ಸುಲಿಗೆ ಮಾಡಿರುವ ಆರೋಪ ವ್ಯಕ್ತವಾಗಿದೆ.
ಹಣ ಸುಲಿಗೆ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ ಪೋಸ್ಟ್ ಮೂಲಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿರುವ ವ್ಯಕ್ತಿಯೊಬ್ಬರು, ‘ಹಳೇ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ಫೆ. 23ರಂದು ರಾತ್ರಿ 11 ಗಂಟೆ ಸುಮಾರಿಗೆ ನನ್ನ ಮಗಳನ್ನು ಅಡ್ಡಗಟ್ಟಿದ್ದ ಪೊಲೀಸರು, ಮದ್ಯ ಕುಡಿದಿರುವುದಾಗಿ ಬೆದರಿಸಿ ₹ 5,000 ಸುಲಿಗೆ ಮಾಡಿದ್ದಾರೆ’ ಎಂದು ದೂರಿದ್ದಾರೆ.
‘ನನ್ನ ಮಗಳು ಒಬ್ಬಳೇ ಕಾರಿನಲ್ಲಿ ಮನೆಗೆ ಹೊರಟಿದ್ದಳು. ವಾಹನ ತಪಾಸಣೆ ನೆಪದಲ್ಲಿ ಪೊಲೀಸರು ಕಾರು ತಡೆದಿದ್ದರು. ಆರಂಭದಲ್ಲಿ ₹ 15 ಸಾವಿರ ಕೇಳಿದ್ದರು. ಅಷ್ಟು ಹಣವಿಲ್ಲವೆಂದು ಮಗಳು ಹೇಳಿದ್ದಳು. ಸುಮ್ಮನಾಗದ ಪೊಲೀಸರು, ಗೂಗಲ್ ಪೇ ಮೂಲಕ ₹ 5,000 ಪಡೆದಿದ್ದಾರೆ. ತಪಾಸಣೆ ವೇಳೆ ಮಹಿಳಾ ಸಿಬ್ಬಂದಿ ಸಹ ಸ್ಥಳದಲ್ಲಿ ಇರಲಿಲ್ಲ’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ದೂರಿನ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್, ‘ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪದ ಬಗ್ಗೆ ವಿಚಾರಣೆಗೆ ಸೂಚಿಸಲಾಗಿದ್ದು, ಇದರ ವರದಿ ಆಧರಿಸಿ ಕಮಿಷನರ್ ಅವರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.
₹ 15 ಸಾವಿರಕ್ಕೆ ಬೇಡಿಕೆ: ‘ಜೀವನ್‌ಬಿಮಾ ನಗರ ಸಂಚಾರ ಠಾಣೆಯ ಪೊಲೀಸರು ಹಳೇ ಏರ್‌ಪೋರ್ಟ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಪಾನಮತ್ತರಾಗಿದ್ದ ಚಾಲಕರನ್ನು ತಡೆದು ಪ್ರಕರಣ ದಾಖಲಿಸುತ್ತಿದ್ದರು. ಇದೇ ಸಂದರ್ಭದಲ್ಲಿ ದೂರುದಾರರ ಮಗಳು ಸ್ಥಳಕ್ಕೆ ಬಂದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಯುವತಿ ಮದ್ಯಪಾನ ಮಾಡಿರಲಿಲ್ಲವೆಂದು ಗೊತ್ತಾಗಿದೆ. ಅಷ್ಟಾದರೂ ಆಲ್ಕೋಮೀಟರ್‌ನಿಂದ ಯುವತಿಯನ್ನು ಪರೀಕ್ಷಿಸಿದ್ದ ಕಾನ್‌ಸ್ಟೆಬಲ್‌ಗಳು, ‘ಮದ್ಯ ಕುಡಿದಿದ್ದೀರಾ? ₹ 15,000 ಕೊಡಿ. ಇಲ್ಲದಿದ್ದರೆ, ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಕಾರು ಜಪ್ತಿ ಮಾಡುತ್ತೇವೆ’ ಎಂದಿದ್ದರು. ತಮ್ಮ ಬಳಿ ಹಣವಿಲ್ಲವೆಂದು ಯುವತಿ ಹೇಳಿದ್ದರು. ₹ 5,000 ನೀಡುವಂತೆ ಕಾನ್‌ಸ್ಟೆಬಲ್‌ಗಳು ಪುನಃ ಬೇಡಿಕೆ ಇರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ಎಟಿಎಂನಲ್ಲಿ ಸಿಗದ ಹಣ, ಮನೆಯಿಂದ ಗೂಗಲ್ ಪೇ: ‘ತನ್ನ ಬಳಿ ಹಣ ಇಲ್ಲ ಎಂದಿದ್ದ ಯುವತಿ, ಎಟಿಎಂನಿಂದ ತೆಗೆಸಿಕೊಡುವುದಾಗಿ ಹೇಳಿದ್ದರು. ಯುವತಿಯನ್ನು ಎಟಿಎಂ ಘಟಕಕ್ಕೆ ಕರೆದೊಯ್ದಿದ್ದ ಕಾನ್‌ಸ್ಟೆಬಲ್, ಹಣ ಪಡೆಯಲು ಹೊರಗೆ ಕಾಯುತ್ತ ನಿಂತಿದ್ದರು’ ಎಂದು ಮೂಲಗಳು ಹೇಳಿವೆ.
‘ಎಟಿಎಂನಲ್ಲಿ ಹಣ ಇಲ್ಲದಿದ್ದರಿಂದ ಯುವತಿ ಖಾಲಿ ಕೈಯಲ್ಲಿ ಹೊರಗೆ ಬಂದಿದ್ದರು. ಹಣವನ್ನು ಮನೆಯಿಂದ ಗೂಗಲ್ ಪೇ ಮಾಡುವುದಾಗಿ ಯುವತಿ ಹೇಳಿದ್ದರು. ಅದಕ್ಕೆ ಒಪ್ಪಿದ್ದ ಕಾನ್‌ಸ್ಟೆಬಲ್, ತನ್ನ ಮೊಬೈಲ್ ಸಂಖ್ಯೆ ನೀಡಿದ್ದ. ಮನೆಗೆ ಹೋಗಿದ್ದ ಯುವತಿ, ಅದೇ ನಂಬರ್‌ಗೆ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.
ಸ್ಥಳದಲ್ಲಿ ಹಾಜರಿದ್ದ ಇನ್‌ಸ್ಪೆಕ್ಟರ್:
‘ವಾಹನ ತಪಾಸಣೆ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಸಹ ಸ್ಥಳದಲ್ಲಿ ಹಾಜರಿದ್ದರು. ಕಾನ್‌ಸ್ಟೆಬಲ್‌ಗಳು ವಾಹನಗಳನ್ನು ತಡೆದು, ಚಾಲಕರನ್ನು ಇನ್‌ಸ್ಪೆಕ್ಟರ್ ಬಳಿ ಕಳುಹಿಸುತ್ತಿದ್ದರು. ಆದರೆ, ಯುವತಿಯನ್ನು ಇನ್‌ಸ್ಪೆಕ್ಟರ್ ಬಳಿ ಕಳುಹಿಸಿರಲಿಲ್ಲ. ಹಣ ಸುಲಿಗೆ ಮಾಡುವ ಉದ್ದೇಶದಿಂದಲೇ ಕಾನ್‌ಸ್ಟೆಬಲ್‌ಗಳು ಈ ರೀತಿ ವರ್ತಿಸಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.