ಬೆಂಗಳೂರು: ನೇರಳೆ ಮಾರ್ಗದ ಮೆಟ್ರೊ ಹಳಿಗೆ ಜಿಗಿದು ಬಿಹಾರದ ಸಿದ್ಧಾರ್ಥ್ ಜೈನ್ (30) ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಜ್ಞಾನಭಾರತಿ ಮೆಟ್ರೊ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ವೈಟ್ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆಗೆ ಮೆಟ್ರೊ ರೈಲು ತೆರಳುತ್ತಿತ್ತು. ಮಧ್ಯಾಹ್ಮ 2.13ರ ವೇಳೆಗೆ ರೈಲು ಬರುತ್ತಿದ್ದಂತೆ ಏಕಾಏಕಿ ಹಳಿಗೆ ಜಿಗಿದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಟೇಷನ್ ಕಂಟ್ರೋಲರ್ ಮತ್ತು ತಂಡ, ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಅನ್ನು ಬಳಸಿ ರೈಲು ಸಂಚಾರ ಸ್ಥಗಿತಗೊಳಿಸಿತು. ರೈಲಿನ ಕೆಳಗೆ ಸಿಲುಕಿದ ಯುವಕ ಹೊರ ಬರಲಾರದೇ ಪರದಾಟ ನಡೆಸಿದ. ಕೊನೆಗೆ ಸಿಬ್ಬಂದಿ ಆತನನ್ನು ಹಳಿಯಿಂದ ಮೇಲಕ್ಕೆ ಎತ್ತಿದರು.
‘ರೈಲು ಹತ್ತು ಮೀಟರ್ ದೂರ ಕ್ರಮಿಸಿತಾದರೂ ಯುವಕ ಹಳಿಗಳ ನಡುವೆ ಸಿಲುಕಿದ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ರೈಲ್ವೆ ಚಾಲಕ ವೇಗವನ್ನು ಗಣನೀಯವಾಗಿ ತಗ್ಗಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನೇರಳೆ ಮಾರ್ಗದಲ್ಲಿ ರೈಲು ಸಂಚಾರವನ್ನು 2.31ಕ್ಕೆ ಪುನರಾರಂಭಿಸಲಾಯಿತು 2.13 ರಿಂದ 2.30ರವರೆಗೆ ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಬದಲು ಮೈಸೂರು ರಸ್ತೆ ಮೆಟ್ರೊ ನಿಲ್ದಾಣದವರೆಗೆ ಎರಡು ರೈಲುಗಳು ‘ಶಾರ್ಟ್ ಲೂಪ್’ನಲ್ಲಿ ಸಂಚರಿಸಿದವು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ರಶ್ಮಿ, ಕೂಡಲೇ ಇಟಿಎಸ್ ಸಿಸ್ಟಂಗೆ ಅಳವಡಿಸಿದ್ದ ಗಾಜು ಅನ್ನು ಕೈಯಿಂದ ಒಡೆದು ಪವರ್ ಆಫ್ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಮೆಟ್ರೊ ರೈಲಿನ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಯುವಕನನ್ನು ರಕ್ಷಣೆ ಮಾಡುವ ಭರದಲ್ಲಿ ರಶ್ಮಿ ಅವರ ಕೈಗೆ ಗಾಯವಾಗಿದೆ. ರಶ್ಮಿ ಅವರ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
₹3 ಲಕ್ಷ ಸಾಲ: ‘ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕುಟುಂಬದ ಸದಸ್ಯರ ಜತೆ ವಾಸವಿರುವ ಸಿದ್ದಾರ್ಥ್, ಮೆಗಾ ಬೈಟ್ ಎಲೆಕ್ಟ್ರಾನಿಕ್ ಷೋ ರೂಂನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ₹ 3 ಲಕ್ಷ ಕೈ ಸಾಲ ಮಾಡಿಕೊಂಡಿದ್ದು, ಮರು ಪಾವತಿಸಲು ಆಗದೆ ಪರದಾಡುತ್ತಿದ್ದರು.
‘ಮನೆ ಬಾಡಿಗೆ ಕಟ್ಟಲು ಸಹ ಹಣವಿರಲಿಲ್ಲ. ಜೀವನ ನಡೆಸುವುದೇ ಕಷ್ಟವಾಗಿತ್ತು. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ವಿಚಾರಣೆ ವೇಳೆ ಸಿದ್ಧಾರ್ಥ್ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
* ಜ. 1ರಂದು ಇಂದಿರಾ ನಗರ ಮೆಟ್ರೊ ನಿಲ್ದಾಣದಲ್ಲಿ ಮೊಬೈಲ್ ಬಿದ್ದ ಕಾರಣ ಮಹಿಳೆಯೊಬ್ಬರು ಹಳಿಗೆ ಜಿಗಿದಿದ್ದರು.
* ಜ. 5ರಂದು ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಶ್ಯಾರೋನ್ (23) ಎಂಬಾತ ಮೆಟ್ರೊ ಬರುತ್ತಿದ್ದಂತೆ ಹಳಿಗೆ ಜಿಗಿದಿದ್ದ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದ.
* ಮಾರ್ಚ್ 21ರಂದು ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಧ್ರುವ್ (20) ಎಂಬಾತ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
* ಆ. 8ರಂದು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಹಳಿ ಮೇಲೆ ಬಿದ್ದಿತ್ತು. ಕೂಡಲೇ ಕೂಡಲೇ ಭದ್ರತಾ ಸಿಬ್ಬಂದಿ ಮಗುವನ್ನು ರಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.