ADVERTISEMENT

ಡಬ್ಬದಡಿ ಪಟಾಕಿ ಇಟ್ಟು, ಜೀವ ತೆಗೆದರು: ಪ್ರಾಣ ಕಸಿದ ಸ್ನೇಹಿತರ ಸವಾಲು

ಸವಾಲು ಸ್ವೀಕರಿಸಿದರೆ ಆಟೊ ಕೊಡಿಸುವ ಆಮಿಷ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 15:42 IST
Last Updated 4 ನವೆಂಬರ್ 2024, 15:42 IST
   

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಸ್ನೇಹಿತರ ಸವಾಲು ಸ್ವೀಕರಿಸಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಗೊಟ್ಟಿಗೆರೆ ಸಮೀಪದ ವೀವರ್ಸ್‌ ಕಾಲೊನಿ ನಿವಾಸಿ ಶಬರಿ (32) ಮೃತಪಟ್ಟವರು.

ಮೃತ ವ್ಯಕ್ತಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು, ವೀವರ್ಸ್‌ ಕಾಲೊನಿ ನಿವಾಸಿಗಳಾದ ನವೀನ್‌ ಕುಮಾರ್‌, ದಿನಕರ್‌, ಸತ್ಯವೇಲು, ಕಾರ್ತಿಕ್‌, ಸತೀಶ್‌ ಹಾಗೂ ಸಂತೋಷ್‌ ಕುಮಾರ್‌ ಅವರನ್ನು ಬಂಧಿಸಿದ್ದಾರೆ.

‘ಶಬರಿ ಮತ್ತು ಆರೋಪಿಗಳು ಸ್ನೇಹಿತರು. ಒಂದೇ ಬಡಾವಣೆಯಲ್ಲಿ ನೆಲಸಿದ್ದರು. ಎಲ್ಲರೂ ಗಾರೆ ಕೆಲಸ ಮಾಡಿಕೊಂಡಿದ್ದರು. ಅ. 31ರಂದು ರಾತ್ರಿ ಶಬರಿ ಅವರು ಮದ್ಯ ಕುಡಿದು ವೀವರ್ಸ್‌ ಕಾಲೊನಿಯ ಮೂರನೇ ಅಡ್ಡರಸ್ತೆಯ ಅಂಥೋನಿ ಅವರ ಅಂಗಡಿಗೆ ಹೋಗಿದ್ದರು. ಅದೇ ವೇಳೆ ಅಂಗಡಿ ಎದುರಿನ ರಸ್ತೆಯಲ್ಲಿ ಆರೋಪಿಗಳು ಪಟಾಕಿ ಸಿಡಿಸುತ್ತಿದ್ದರು. 

ADVERTISEMENT

ಆಟೊ ಕೊಡಿಸುವ ಆಮಿಷ:

‘ಪಟಾಕಿ ಹಚ್ಚುವಾಗ ಡಬ್ಬದ ಮೇಲೆ ಕುಳಿತರೆ ಆಟೊ ಕೊಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿದ್ದರು. ಮದ್ಯದ ಅಮಲಿನಲ್ಲಿದ್ದ ಶಬರಿ ಆರೋಪಿಗಳ ಸವಾಲು ಸ್ವೀಕರಿಸಿದ್ದರು. ಬಳಿಕ ಆರೋಪಿಗಳು ಭಾರಿ ಸ್ಫೋಟದ ಪಟಾಕಿಗಳನ್ನು ತಂದು ರಸ್ತೆಯಲ್ಲಿ ಇಟ್ಟು ಅದರ ಮೇಲೆ ತಲೆಕೆಳಗಾಗಿ ಡಬ್ಬವನ್ನು ಮುಚ್ಚಿ ಅದರ ಮೇಲೆ ಶಬರಿ ಅವರನ್ನು ಕೂರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪಟಾಕಿಯ ಬತ್ತಿಗೆ ಬೆಂಕಿ ಹಚ್ಚಿ ಆರೋಪಿಗಳು ದೂರಕ್ಕೆ ಓಡಿದ್ದರು. ಶಬರಿ ಅವರು ಡಬ್ಬದ ಮೇಲೆಯೇ ಕುಳಿತಿದ್ದರು. ಆಗ ಪಟಾಕಿಗಳು ಸಿಡಿದು ಗಾಯಗೊಂಡಿದ್ದರು. ಸ್ಥಳೀಯರು ಶಬರಿ ಅವರನ್ನು ಆಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.