ಯಲಹಂಕ: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ಎನ್‌ಟಿಐ ಬಡಾವಣೆಯಲ್ಲಿ ಜಮೀನು ವಿಚಾರವಾಗಿ ಸೋಮವಾರ ಗಲಾಟೆ ನಡೆದಿದ್ದು, ಪ್ರಕಾಶ್ (45) ಅವರನ್ನು ಕೊಲೆ ಮಾಡಲಾಗಿದೆ.
ಸ್ಥಳೀಯ ನಿವಾಸಿ ಪ್ರಕಾಶ್ ಅವರ ಕೊಲೆ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದಾರೆ. ಕೃತ್ಯ ಎಸಗಿರುವ ಆರೋಪದಡಿ ಎನ್‌ಟಿಐ ಸೊಸೈಟಿಯ ಕಾರ್ಯದರ್ಶಿ ಪ್ರತಾಪ್ ಚಂದ್ರ ರಾಥೋಡ್, ಗುತ್ತಿಗೆದಾರ ಆರ್. ನಾಗರಾಜ್, ಅಂಜನ್‌ಕುಮಾರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘ಎಸ್.ಸಿ–ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಹಾಗೂ ಕೊಲೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ 9 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
1 ಎಕರೆ 6 ಗುಂಟೆ ಜಮೀನು: ‘ಕೋತಿಹೊಸಹಳ್ಳಿ ಗ್ರಾಮದ ಎನ್‌ಟಿಐ ಬಡಾವಣೆಯಲ್ಲಿ ಪ್ರಕಾಶ್ ಅವರಿಗೆ ಸೇರಿದ್ದ 1 ಎಕರೆ 6 ಗುಂಟೆ ಜಮೀನು ಇದೆ. ಈ ಜಾಗಕ್ಕೆ ಸಂಬಂಧಿಸಿದಂತೆ ಎನ್‌ಟಿಐ ಹೌಸಿಂಗ್ ಕೋ–ಆಪರೇಟಿವ್ ಸೊಸೈಟಿ ವ್ಯಾಜ್ಯ ಹೂಡಿದೆ. ಇದೇ ವ್ಯಾಜ್ಯದ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಸಂಬಂದ ಪ್ರಕಾಶ್ ಅವರು ಠಾಣೆಗೂ ದೂರು ನೀಡಿದ್ದರು. ಇದೇ ವೈಷಮ್ಯದಿಂದ ಪ್ರಕಾಶ್ ಅವರ ಕೊಲೆಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿಗಳು ಸೋಮವಾರ (ಜ. 29) ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆಸಿಬಿ ಯಂತ್ರ, ಟಿಪ್ಪರ್ ಲಾರಿಗಳ ಸಮೇತ ಅಕ್ರಮವಾಗಿ ಜಮೀನಿನಲ್ಲಿ ಪ್ರವೇಶಿಸಿದ್ದರು. ಇದನ್ನು ಪ್ರಶ್ನಿಸಲು ಪ್ರಕಾಶ್ ಹಾಗೂ ಪತ್ನಿ ಸ್ಥಳಕ್ಕೆ ಹೋಗಿದ್ದರು. ಪತ್ನಿ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಅದರನ್ನು ತಡೆಯಲು ಹೋದ ಪ್ರಕಾಶ್ ಅವರ ಎದೆಗೆ ಗುದ್ದಿದ್ದರು. ಎಳೆದಾಡಿ ಹಲ್ಲೆ ಮಾಡಿದ್ದರು. ಇದರಿಂದ ತೀವ್ರ ಗಾಯಗೊಂಡ ಪ್ರಕಾಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆ ನಡೆಸಿದ ವೈದ್ಯರು, ಪ್ರಕಾಶ್ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಠಾಣೆ ಎದುರು ಪ್ರತಿಭಟನೆ: ‘ಪ್ರಕಾಶ್ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು. ಪ್ರಕಾಶ್ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿ ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ಕಾರ್ಯಕರ್ತರ ನೇತೃತ್ವದಲ್ಲಿ ಸಂಬಂಧಿಕರು ಕೊಡಿಗೇಹಳ್ಳಿ ಠಾಣೆ ಎದುರು ಸೋಮವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಪ್ರತಿಭಟನೆ ನಡೆಸಿದರು.
‘ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಸೂಕ್ತ ಪರಿಹಾರ ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್, ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.