ಬೆಂಗಳೂರು: ಆರ್ಡರ್ ಮಾಡಿದ ಪಿಜ್ಜಾ ರದ್ದು ಮಾಡಿ, ಹಣ ವಾಪಸ್ ಪಡೆಯಲು ಹೋಗಿ ಡಿ.1ರಂದು ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ₹ 95 ಸಾವಿರ ಕಳೆದುಕೊಂಡಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿ ಶೈಕ್, ಫುಡ್ ಡೆಲಿವರಿ ಆ್ಯಪ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಗಂಟೆ ಕಳೆದರೂ ಪಿಜ್ಜಾ ಬರಲಿಲ್ಲ. ಆಗ ಆ್ಯಪ್‌ನ
ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಇದಾದ ಎರಡು ಗಂಟೆಯಲ್ಲಿ ಶೈಕ್ ಅವರ ಬ್ಯಾಂಕ್ ಖಾತೆಯಿಂದ ₹ 95 ಸಾವಿರ ಮಾಯವಾಗಿದೆ!
ಸಂಬಳ, ಉಳಿತಾಯದ ಹಣ ಕಳೆದುಕೊಂಡ ಶೈಕ್, ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದೆ’ ಎಂದರು.
‘ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದಾಗ ಅವರು, ಸದ್ಯ ನಾವು ಪಿಜ್ಜಾ ಆರ್ಡರ್ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಹಣವನ್ನು ಮರು ಸಂದಾಯ ಮಾಡುತ್ತೇವೆ. ಶೀಘ್ರ ಹಣ ವಾಪಸು ಆಗಬೇಕೆಂದರೆ, ನಾವು ಕಳುಹಿಸುವ ಲಿಂಕ್‌ನಲ್ಲಿನ ವಿವರಗಳನ್ನು ಭರ್ತಿ ಮಾಡಿ ಕಳುಹಿಸಿ ಎಂದು ಹೇಳಿದರು’ ಎಂದು ದೂರಿನಲ್ಲಿ ಶೈಕ್ ವಿವರಿಸಿದ್ದಾರೆ.
ಅವರು ಕಳುಹಿಸಿದ್ದ ಲಿಂಕ್‌ನಲ್ಲಿ ವಿವರ ದಾಖಲಿಸುತ್ತಿದ್ದಂತೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅವರ ಖಾತೆಯಿಂದ ₹ 45 ಸಾವಿರ ಕಡಿತಗೊಂಡಿದೆ. ಖಾತೆಯಲ್ಲಿದ್ದ ಉಳಿದಿದ್ದ ₹ 50 ಸಾವಿರವನ್ನು ಇನ್ನೊಂದು ಬ್ಯಾಂಕ್‌ನ ಖಾತೆಗೆ ವರ್ಗಾಯಿಸುವ ಮೊದಲೇ ಅದೂ ಕಡಿತವಾಗಿದೆ.
‘ಲಿಂಕ್‌ನಲ್ಲಿ, ಯಾವ ಖಾತೆಗೆ ಹಣ ಮರು
ಪಾವತಿಸಬೇಕು ಎನ್ನುವ ವಿವರ ಹಾಗೂ ನನ್ನ
ಫೋನ್ ಪೇ ಬಳಕೆದಾರರ ಹೆಸರು (ಯೂಸರ್ ನೇಮ್) ನಮೂದಿಸ
ಬೇಕಿತ್ತು. ಅದನ್ನು ಭರ್ತಿ ಮಾಡಿದೆ. ನನ್ನ ಖಾತೆ
ಯಿಂದ ಹಣ ಹೋಗುತ್ತದೆ ಎನ್ನುವ ಕಲ್ಪನೆಯೇ ನನಗೆ ಇರಲಿಲ್ಲ’ ಎಂದು ತಿಳಿಸಿದ್ದಾರೆ.
‘ನ.29ರಂದು ಸಂಬಳವಾಗಿತ್ತು. ನನ್ನ ತಾಯಿಯ ಆರೋಗ್ಯ ಸರಿ ಇರಲಿಲ್ಲ. ಅವರ ಚಿಕಿತ್ಸೆಗಾಗಿ ಹಣ ಕೂಡಿಟ್ಟಿದ್ದೆ. ಅದೆಲ್ಲವೂ ಹೋಯಿತು. ದಯವಿಟ್ಟು ಪತ್ತೆ ಹಚ್ಚಿ ಕೊಡಿ’ ಎಂದು ಅವರು ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.