ಬೆಂಗಳೂರು: ಮೋಜಿಗಾಗಿ ನಮ್ಮ ಮೆಟ್ರೊ ತುರ್ತು ಟ್ರಿಪ್ ಸಿಸ್ಟಂ (ಇಟಿಎಸ್) ಬಟನ್ ಒತ್ತುವ ಮೂಲಕ ಮೆಟ್ರೊ ಸಂಚಾರಕ್ಕೆ ತೊಡಕುಂಟು ಮಾಡಿದ್ದ ಯುವಕನಿಗೆ ಬಿಎಂಆರ್‌ಸಿಎಲ್ ₹ 5000 ದಂಡ ವಿಧಿಸಿದೆ.
ನೇರಳೆ ಮಾರ್ಗದಲ್ಲಿ ಎಂ.ಜಿ.ರೋಡ್ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮಂಗಳವಾರ ಇಟಿಎಸ್ ಬಟನ್ ಒತ್ತಿದ್ದರು. ಇದರಿಂದ ಟ್ರಿನಿಟಿ ನಿಲ್ದಾಣ ಕಡೆಯಿಂದ ಬರುತ್ತಿದ್ದ ರೈಲು ಎಂ.ಜಿ. ರೋಡ್ ನಿಲ್ದಾಣದಲ್ಲಿ ಸುಮಾರು 10 ನಿಮಿಷ ನಿಲ್ಲಬೇಕಾಯಿತು. ಆದರೆ, ಯಾರಿಗೆ ಏನು ತೊಂದರೆಯಾಗಿದೆ ಎಂದು ಗೊತ್ತಾಗಿರಲಿಲ್ಲ. ಮೆಟ್ರೊ ರೈಲು ಸಂಚಾರ ಮಾತ್ರ ಅಸ್ತ್ರವ್ಯಸ್ತಗೊಂಡಿತ್ತು.
ಸಿಸಿಟಿವಿ ಕ್ಯಾಮೆರಾ ಮೂಲಕ ಇಟಿಎಸ್ ಒತ್ತಿದವರನ್ನು ಗುರುತಿಸಲಾಯಿತು. ಮೆಟ್ರೊ ರೈಲು ಪುನರಾರಂಭಗೊಂಡಾಗ ಇಟಿಎಸ್ ಒತ್ತಿದ್ದ ವ್ಯಕ್ತಿ ರೈಲು ಹತ್ತಿದ್ದು, ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇಳಿದರು. ಅವರನ್ನು ಮೆಟ್ರೊ ಸಿಬ್ಬಂದಿ ಹಿಂಬಾಲಿಸಿ ಹೋಗಿ ವಶಕ್ಕೆ ಪಡೆದು ವಿಚಾರಿಸಿದಾಗ 21 ವರ್ಷದ ಹೇಮಂತ್ ಎಂಬ ಆ ಯುವಕ ಮೋಜಿಗಾಗಿ ಬಟನ್ ಒತ್ತಿರುವುದಾಗಿ ತಿಳಿಸಿದ್ದ.
‘ಯುವಕನು ತಪ್ಪೊಪ್ಪಿಕೊಂಡಿದ್ದು, ₹ 5000 ದಂಡ ಕಟ್ಟಲು ತಿಳಿಸಿದೆವು. ತನ್ನಲ್ಲಿ ಹಣ ಇಲ್ಲ ಎಂದು ಯುವಕ ಹೇಳಿದ್ದರಿಂದ ಆತನ ಹೆತ್ತವರಿಗೆ ಮಾಹಿತಿ ನೀಡಲಾಯಿತು. ಅವರು ಬಂದು ದಂಡ ಪಾವತಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾರೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೊ ಹಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಜಾರಿ ಬಿದ್ದಾಗ ಅಥವಾ ಜಿಗಿದಾಗ ನಿಲ್ದಾಣದಲ್ಲಿರುವ ಇಟಿಎಸ್ ಬಟನ್ ಅನ್ನು ಬಳಸಲಾಗುತ್ತದೆ. ಬಟನ್ ಒತ್ತಿದ ಕೂಡಲೇ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ಮೆಟ್ರೊ ಸಂಚಾರವನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.