ADVERTISEMENT

ಬೆಕ್ಕಿಗೆ ಹಾಲು ಹಾಕಲು ಕೀ ಪಡೆದು ಚಿನ್ನಾಭರಣ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:36 IST
Last Updated 18 ಜೂನ್ 2024, 14:36 IST
ವೆಂಕಟೇಶ್‌ 
ವೆಂಕಟೇಶ್‌    

ಬೆಂಗಳೂರು: ಬೆಕ್ಕಿಗೆ ಹಾಲು ಹಾಕಲೆಂದು ಪಕ್ಕದ ಮನೆಯ ಕೀ ಪಡೆದುಕೊಂಡಿದ್ದ ಯುವಕ ಅದೇ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಜಯನಗರ ನಿವಾಸಿ ವೆಂಕಟೇಶ್(23) ಬಂಧಿತ.

ಆರೋಪಿಯಿಂದ ₹80 ಸಾವಿರ ಮೌಲ್ಯದ 10 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಜಯನಗರದ 7ನೇ ಬ್ಲಾಕ್‌ನಲ್ಲಿ ದೂರುದಾರರು ವಾಸವಾಗಿದ್ದು ಅವರ ಮನೆ ಪಕ್ಕದಲ್ಲೇ ಆರೋಪಿ ಕೂಡ ವಾಸವಾಗಿದ್ದ. ಇಬ್ಬರಿಗೂ ಪರಿಚಯವಿತ್ತು. ಆರೋಪಿ ಕಾರು ವಾಷಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ಜೂನ್ 9ರಂದು ದೂರುದಾರರು ಬೇರೆ ಊರಿಗೆ ತೆರಳಿದ್ದರು. ಆಗ, ಮನೆಯ ಕೀ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಪಕ್ಕದ ಮನೆಯಲ್ಲಿ ಸಾಕಿದ್ದ ಬೆಕ್ಕಿಗೆ ಹಾಲು ಹಾಕಲು ತೆರಳಿದ್ದ ಆರೋಪಿ, ಬೀರುವಿನಲ್ಲಿಟ್ಟಿದ್ದ ಚಿನ್ನದ ಸರ ಕಳವು ಮಾಡಿದ್ದ. ಜೂನ್ 12ರಂದು ದೂರುದಾರರು ವಾಪಸ್ ಮನೆಗೆ ಬಂದಾಗ ಬೀರುವಿನಲ್ಲಿ ಇಟ್ಟಿದ್ದ ಸರ ಕಳ್ಳತನವಾಗಿರುವುದು ಗೊತ್ತಾಗಿತ್ತು. ಅವರು ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಆರೋಪಿ ವಿಚಾರಣೆಯ ಆರಂಭದಲ್ಲಿ ಕಳ್ಳತನ ಮಾಡಿಲ್ಲ ಎಂದು ಹೇಳಿದ್ದ. ಆದರೆ, ಆತನ ಮೊಬೈಲ್ ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ, ಚಿನ್ನಾಭರಣ ಅಡಮಾನ ಇಟ್ಟಿರುವ ರಶೀದಿ ಪತ್ತೆಯಾಗಿತ್ತು. ಅದನ್ನು ತೋರಿಸಿ ಪ್ರಶ್ನಿಸಿದಾಗ ಆರ್ಥಿಕ ಸಮಸ್ಯೆ ಇತ್ತು. ಹೀಗಾಗಿ, ಒಮ್ಮೆ ಬೆಕ್ಕಿಗೆ ಹಾಲು ಹಾಕಲು ಹೋದಾಗ ಮನೆಯ ಎಲ್ಲೆಡೆ ಗಮನಿಸಿದ್ದೆ. ಆಗ ಬೀರುವಿನಲ್ಲಿ ಏನಾದರೂ ಇರಬಹುದು ಎಂದು ಕುತೂಹಲಗೊಂಡು ಬೀರು ತೆರೆದಿದ್ದೆ. ಆಗ ಚಿನ್ನದ ಸರ ಸಿಕ್ಕಿತ್ತು ಎಂದು ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.