ಬೆಂಗಳೂರು: ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿಎಲ್) ಲಾಲ್‌ಬಾಗ್‌ನಲ್ಲಿ ಆಯೋಜಿಸಿದರುವ ಮಾವು ಮತ್ತು ಹಲಸು ಮೇಳಕ್ಕೆ ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರಕಾಶ್ ಎಂ. ಸೊಬರದ ಶುಕ್ರವಾರ ಚಾಲನೆ ನೀಡಿದರು.
ರೈತರು ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ. ಜೂನ್ 10ರವರೆಗೆ ಈ ಮೇಳ ನಡೆಯಲಿದೆ.
‘ಹದಿನೆಂಟಕ್ಕೂ ಹೆಚ್ಚು ಮಾವಿನ ತಳಿಗಳು ಮತ್ತು ವಿವಿಧ ಹಲಸಿನ ತಳಿಗಳು ಮೇಳದಲ್ಲಿ ಲಭ್ಯ ಇವೆ. ರೈತರು ಮತ್ತು ಗ್ರಾಹಕರನ್ನು ಒಳಗೊಂಡ ಸಮಿತಿಯು ಹಣ್ಣಿನ ದರಗಳನ್ನು ನಿಗದಿಪಡಿಸಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜ್, ‘ಮಾವು ಪ್ರಿಯರಿಗೆ ಹೊರೆಯಾಗದಂತೆ ಮತ್ತು ರೈತರಿಗೆ ನಷ್ಟವಾಗದಂತೆ ಬೆಲೆ ನಿಗದಿ ಮಾಡಲಾಗಿದೆ. ಆ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ಉತ್ತಮ ಬೆಲೆಗೆ ಮಾವಿನ ಹಣ್ಣು ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ಗ್ರಾಹಕರು ಮತ್ತು ರೈತರಿಗೆ ನೆರವಾಗುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ 1.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತಿವರ್ಷ ಸರಾಸರಿ 12 ಲಕ್ಷದಿಂದ 14 ಲಕ್ಷ ಟನ್‌ಗಳಷ್ಟು ಇಳುವರಿ ನಿರೀಕ್ಷಿಸಲಾಗುತ್ತಿತ್ತು. ಆದರೆ, ಈ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಯ ಉತ್ಪಾದನೆಯಲ್ಲಿ ಶೇ 30ರಷ್ಟು ಫಸಲು ಮಾತ್ರ ಲಭ್ಯವಾಗಿದೆ. ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ’ ಎಂದರು.
‘ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸಲಾಗುತ್ತದೆ. ರಾಸಾಯನಿಕ ಮುಕ್ತ ಮಾವಿನ ಹಣ್ಣನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಮಾವು, ಹಲಸು ಹಣ್ಣುಗಳ ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ, ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಉತ್ಕೃಷ್ಟ ಗುಣಮಟ್ಟದ ತಾಜಾ ಹಣ್ಣುಗಳು ಸಿಗುವಂತೆ ಮಾಡುವುದು ಈ ಮೇಳದ ಉದ್ದೇಶವಾಗಿದೆ’ ಎಂದು ತಿಳಿಸಿದರು.
‘ಹಲಸು ಕೂಡ ಒಂದು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದು, ರಾಜ್ಯದಲ್ಲಿ ಒಟ್ಟು 2,309 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ’ ಎಂದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಭಾಗವಹಿಸಿದ್ದರು.
‘ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಇದೆ. ಆದ್ದರಿಂದ ಈ ಬಾರಿ ಸ್ವಲ್ಪ ದರಗಳು ಹೆಚ್ಚಾಗಿವೆ’ ಎಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಾವು ಬೆಳೆಗಾರ ಹಾಗೂ ಮಾರಾಟಗಾರ ಬಾಬು ರೆಡ್ಡಿ ತಿಳಿಸಿದರು. ‘ಹೋದ ವರ್ಷ ಆರಂಭಿಕ ಹಂತದಲ್ಲಿ ಮಳೆ ಕೈಕೊಟ್ಟ ಪರಿಣಾಮ ಹೂ ಬಿಡುವ ಹಂತದಲ್ಲೇ ಮಾವಿನ ಫಸಲು ಉದುರಿತ್ತು. ಡಿಸೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹೂವು ಜನವರಿ ಫೆಬ್ರುವರಿ ತಿಂಗಳಲ್ಲಿ ಬಂದಿತ್ತು. ಫಸಲು ತಡವಾಗುವುದರ ಜೊತೆಗೆ ಬಿಸಿಲಿನ ತಾಪಕ್ಕೆ ಕಾಯಿ ಆಗಬೇಕಿದ್ದ ಪಿಂದೆ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರಿದೆ. ಆದ್ದರಿಂದ ಮಾವಿನ ಬೆಳೆ ಕುಂಠಿತಗೊಂಡಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.