ADVERTISEMENT

232 ಮಳಿಗೆಗಳಲ್ಲಿ ಮಾವು ಹಲಸು ಮೇಳ

ಇದೇ 15ರಿಂದ ಆರಂಭಿಸಲು ಹಾಪ್‍ಕಾಮ್ಸ್ ಚಿಂತನೆ l ಸಂಚಾರ ಮಳಿಗೆ ಮೂಲಕ ಗ್ರಾಹಕರಿಗೆ

ಮನೋಹರ್ ಎಂ.
Published 10 ಮೇ 2020, 19:40 IST
Last Updated 10 ಮೇ 2020, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಲ್‍ಬಾಗ್ ಉದ್ಯಾನದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಮಾವು ಮತ್ತು ಹಲಸಿನ ಮೇಳಕ್ಕೆ ಈ ಬಾರಿ ಲಾಕ್‍ಡೌನ್‌ನಿಂದಾಗಿ ಅಡ್ಡಿ ಉಂಟಾಗಿದೆ. ಹಲಸು ಮತ್ತು ಮಾವು ಪ್ರಿಯರಿಗೆ ನಿರಾಸೆಯಾಗಬಾರದು ಎಂಬ ಕಾರಣಕ್ಕೆ ಇದೇ 15ರಿಂದ ನಗರದಲ್ಲಿರುವ 232 ಮಳಿಗೆಗಳಲ್ಲಿ ಮೇಳ ಆಯೋಜಿಸಲು ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್‍ಕಾಮ್ಸ್) ಚಿಂತನೆ ನಡೆಸಿದೆ.

ಪ್ರತಿ ವರ್ಷ ಮೇ ತಿಂಗಳಿನಲ್ಲಿಹಾಪ್‍ಕಾಮ್ಸ್ ವತಿಯಿಂದ ಮೇಳ ಆಯೋಜಿಸಲಾಗುತ್ತದೆ. ಈ ಬಾರಿಯೂ ಮೇಳ ನಡೆಸಲುಹಾಪ್‍ಕಾಮ್ಸ್‌ ಯೋಜನೆ ರೂಪಿಸಿತ್ತು. ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದು, ಲಾಕ್‍ಡೌನ್ ತೆರವಾಗುತ್ತದೆಂಬ ಹಾಪ್‍ಕಾಮ್ಸ್ ನಿರೀಕ್ಷೆ ಸುಳ್ಳಾಯಿತು.

ಒಂದೇ ಕಡೆ ಮೇಳ ಏರ್ಪಡಿಸಿದರೆ ಹೆಚ್ಚು ಜನ ಸೇರುತ್ತಾರೆ. ಜನ ಅಂತರ ಕಾಯ್ದುಕೊಳ್ಳುವುದು ತುಸು ಕಷ್ಟ. ಹೀಗಾಗಿ ಲಾಲ್‍ಬಾಗ್‍ನಲ್ಲಿ ಮೇಳ ನಡೆಸುವ ನಿರ್ಧಾರ ಕೈಬಿಟ್ಟು, ಎಲ್ಲ ಮಳಿಗೆಗಳು ಹಾಗೂ ಸಂಸ್ಥೆಯ 40 ಸಂಚಾರ ಮಳಿಗೆಗಳ ಮೂಲಕ ಹಲಸು, ಮಾವಿನ ಹಣ್ಣನ್ನು ಗ್ರಾಹಕರಿಗೆ ತಲುಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ADVERTISEMENT

‘ಲಾಕ್‍ಡೌನ್ ತೆರವಾಗುತ್ತಿದ್ದರೆ ಮೇಳ ಎಂದಿನಂತೆ ನಿರಾತಂಕವಾಗಿ ನಡೆಯುತ್ತಿತ್ತು. ಲಾಕ್‍ಡೌನ್ ಮೇ 3ಕ್ಕೆ ಮುಗಿಯಲಿದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಕೊರೊನಾ ಸೋಂಕು ಪ್ರಕರಣಗಳು ದಿನನಿತ್ಯ ಹೆಚ್ಚುತ್ತಲೇ ಇದೆ. ಹಾಗಾಗಿಮೇ 15ರಿಂದ ಮಳಿಗೆಗಳಲ್ಲೇ ಮೇಳ ಆಯೋಜಿಸುವ ಉದ್ದೇಶವಿದೆ. ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ ಅಂತಿಮಗೊಳಿಸುತ್ತೇವೆ’ ಎಂದು ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದ ಮಾವಿನ ಕೊಯ್ಲು ಮೇ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ. ಹೀಗಾಗಿ ಪ್ರತಿ ವರ್ಷ ಇದೇ ತಿಂಗಳಿನಲ್ಲಿ ಮೇಳ ಆರಂಭಿಸುವುದು ವಾಡಿಕೆ. ಈ ಬಾರಿಯೂ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಗುಣಮಟ್ಟದ ಮಾವು ಬೆಳೆಯಲಾಗಿದೆ. ಬಾದಾಮಿ ತಳಿಯ ಮಾವಿಗೆ ಹೆಚ್ಚು ಬೇಡಿಕೆ ಇದೆ. ಮಲ್ಲಿಕಾ, ರಸಪುರಿ, ಸಿಂಧೂರ ಮಾವುಗಳು ಹಾಗೂ ಚಂದ್ರಾ, ಲಾಲ್‍ಬಾಗ್, ಜಾಣಗೆರೆ ತಳಿಯ ಹಲಸುಗಳು ಮೇಳದಲ್ಲಿ ಮಾರಾಟವಾಗಲಿವೆ. ರಿಯಾಯಿತಿ ದರದಲ್ಲಿ ಗುಣಮಟ್ಟದ ಮಾವು ಮತ್ತು ಹಲಸು ಗ್ರಾಹಕರ ಕೈಸೇರಲಿವೆ. ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಮೇಳಕ್ಕೆ ಚಾಲನೆ ನೀಡಲಾಗುವುದು’ ಎಂದು ಹಾಪ್‍ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.

ಶೇ 50ರಷ್ಟು ವ್ಯಾಪಾರ ಹೆಚ್ಚಳ

‘ಮಳೆ ಹಾಗೂ ವಿವಿಧ ರೋಗಗಳಿಂದ ಈ ಬಾರಿ ಮಾವು ಇಳುವರಿ ಕಡಿಮೆಯಾಗಿದೆ. ಆದರೆ, ಗ್ರಾಹಕರಿಂದ ಗುಣಮಟ್ಟದ ಮಾವಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಬಾರಿಗಿಂತಶೇ 50ರಷ್ಟು ಮಾವು ಮಾರಾಟ ಏರಿಕೆಯಾಗಿದೆ. ಇದರಿಂದ ಮಾವು ಬೆಳೆಗಾರರಿಗೂ ಲಾಭ ಕೈಸೇರಲಿದೆ’ ಎಂದು ಬಿ.ಎನ್.ಪ್ರಸಾದ್ ಅವರುತಿಳಿಸಿದರು.

‘ಲಾಲ್‍ಬಾಗ್‍ನಲ್ಲಿ ನಡೆಯುವ ಮೇಳದಲ್ಲಿ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಸಿಗುತ್ತಿತ್ತು. ಮಳಿಗೆಗಳಲ್ಲಿ ಮೇಳ ನಡೆಯುವುದರಿಂದ ಮನೆಯಲ್ಲೇ ಇರುವ ಗ್ರಾಹಕರಿಗೆ ಸ್ಥಳೀಯವಾಗಿ ಮಾವು ಮತ್ತು ಹಲಸು ಲಭ್ಯವಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಗ್ರಾಹಕರ ಕೈಸೇರಿದ 45 ಟನ್ ಮಾವು

'ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಅಂಚೆ ಸೇವೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಈವರೆಗೆ ಒಟ್ಟು 45 ಟನ್ ಮಾವು ತಲುಪಿದೆ. ಒಟ್ಟು 15 ಸಾವಿರ ಮಾವಿನ ಬಾಕ್ಸ್‌ಗಳು ಗ್ರಾಹಕರ ಕೈಸೇರಿವೆ. ಮಾವು ಖರೀದಿಗೆ ಪ್ರವಾಸದ ರೂಪದಲ್ಲಿ ಗ್ರಾಹಕರನ್ನು ರೈತರ ತೋಟಗಳಿಗೆ ಕರೆದೊಯ್ಯಲಾಗುತ್ತಿತ್ತು. ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದ ಮಾವಿನ ತೋಟಗಳಿಗೆ ತೆರಳಿ ನೇರವಾಗಿ ಮಾವು ಖರೀದಿಸುವ ವ್ಯವಸ್ಥೆ ಇತ್ತು. ಲಾಕ್‍ಡೌನ್ ಇರುವುದರಿಂದ ಈ ಬಾರಿಯ ಮಾವು ಖರೀದಿ ಪ್ರವಾಸ ನಡೆಯುವುದು ಅನುಮಾನ' ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.