ಬೆಂಗಳೂರು: ‘ಯುದ್ದ ಪೀಡಿತ ಉಕ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಾಂಧೀಜಿಯ ಶಾಂತಿ ಸಂದೇಶ ನೆನಪಾಗಿದೆ. ಆದರೆ, ಮಣಿಪುರ ಹೊತ್ತಿ ಉರಿದರೂ ಅವರು ಮೌನವಾಗಿದ್ದರು’ ಎಂದು ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.
ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆ ನಿಮಿತ್ತ ಗಾಂಧಿಭವನದಲ್ಲಿ ಶನಿವಾರ ‘21ನೇ ಶತಮಾನಕ್ಕೆ ಗಾಂಧೀಜಿ’ ವಿಷಯದ ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
‘ವಿದೇಶಗಳಲ್ಲಿ ಗಾಂಧಿ ಮತ್ತು ಅವರ ವಿಚಾರಧಾರೆ ಬಗ್ಗೆ ಮಾತನಾಡುವವರು ತಮ್ಮ ದೇಶದಲ್ಲಿ ಅವುಗಳ ಹತ್ಯೆ ಮಾಡುತ್ತಿದ್ದಾರೆ. ದೇಶದಲ್ಲಿ ಗೋಡ್ಸೆ, ಸಾವರ್ಕರ್ ವಿಚಾರಧಾರೆಗಳ ತಾಂಡವ ಹೆಚ್ಚಾಗಿದ್ದರಿಂದ ಮಹಾತ್ಮನ ವಿಚಾರಧಾರೆಗಳು ರೋಗಗ್ರಸ್ತವಾಗಿವೆ. ಗೋಡ್ಸೆ ಆಡಳಿತ ನಡೆಸುತ್ತಿರುವುದರಿಂದ ಗಾಂಧೀಜಿ ಸ್ಥಾಪಿಸಿದ ಸಂಸ್ಥೆಗಳು, ಅವರ ತತ್ವಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಗಳನ್ನು ಕಸಿದುಕೊಳ್ಳಲಾಗುತ್ತಿದೆ ’ ಎಂದು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ರಾಜ್ಯದ 25 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡಿವೆ. ಗಾಂಧಿ ಭವನ ಗ್ರಂಥಾಲಯದ 11,720 ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ರಾಮಚಂದ್ರ ರಾಹಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ಕಾರ್ಯಾಧ್ಯಕ್ಷ ವಿಶುಕುಮಾರ್ , ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ, ನವದೆಹಲಿ ಸ್ಮಾರಕ ನಿಧಿ ಅಧ್ಯಕ್ಷ ಸಂಜೋಯ್ ಸಿಂಗ್, ಶಿವರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.