ADVERTISEMENT

ಪೀಠೋಪಕರಣ ಜಪ್ತಿಗೆ ತಡೆ ತಂದ ಮಂತ್ರಿ ಮಾಲ್‌ ಮಾಲೀಕರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 5:37 IST
Last Updated 19 ಫೆಬ್ರುವರಿ 2023, 5:37 IST
ಮಂತ್ರಿ ಮಾಲ್‌
ಮಂತ್ರಿ ಮಾಲ್‌   

ಬೆಂಗಳೂರು: ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ಮಂತ್ರಿ ಸ್ಕ್ವೇರ್‌ ಮಾಲ್‌ನ ಪೀಠೋಪಕರಣಗಳನ್ನು ಶನಿವಾರ ಜಪ್ತಿ ಮಾಡಲು ತೆರಳಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಡೆಯಾಜ್ಞೆ ಹಿನ್ನೆಲೆಯಲ್ಲಿ ವಾಪಸ್ಸಾದರು.

ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್‌ಗಳು ಹಾಗೂ ಪೊಲೀಸ್ ಸಿಬ್ಬಂದಿ ಪೀಠೋಪಕರಣಗಳ ಜಪ್ತಿಗೆ ತೆರಳಿದ್ದರು.

‘2018ರಿಂದಲೂ ಮಂತ್ರಿ ಸ್ಕ್ವೇರ್ ಮಾಲ್‌ನವರು ₹ 42.63 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದನ್ನು ಪಾವತಿಸುವಂತೆ ಈ ಹಿಂದೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೂ ಅವರು ತೆರಿಗೆ ಪಾವತಿಸದ ಕಾರಣಕ್ಕೆ ಮಾಲ್‌ನಲ್ಲಿದ್ದ ಕುರ್ಚಿ, ಕಂಪ್ಯೂಟರ್ ಹಾಗೂ ಟೇಬಲ್‌ಗಳನ್ನು ವಶಕ್ಕೆ ಪಡೆದುಕೊಂಡು ಲಾರಿಗೆ ಭರ್ತಿ ಮಾಡುತ್ತಿದ್ದೆವು. ಆ ವೇಳೆ ವಕೀಲರು ತಡೆಯಾಜ್ಞೆ ಪ್ರತಿ ನೀಡಿದ್ದರಿಂದ ಪೀಠೋಪಕರಣಗಳನ್ನು ಅಲ್ಲಿಯೇ ಬಿಟ್ಟು ಬಂದೆವು’ ಎಂದು ಬಿಬಿಎಂ‍ಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಯೋಗೇಶ್‌ ತಿಳಿಸಿದರು.

ADVERTISEMENT

‘ಪೀಠೋಪಕರಣ ಪ್ರಕ್ರಿಯೆ ಆರಂಭಕ್ಕೂ ಮುನ್ನೂ ಯಾರೂ ತಡೆಯಾಜ್ಞೆ ಪ್ರತಿ ನೀಡಿರಲಿಲ್ಲ. ಆದ್ದರಿಂದ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಪ್ತಿ ಪ್ರಕ್ರಿಯೆ ಆರಂಭಿಸಿದ್ದೆವು’ ಎಂದೂ ತಿಳಿಸಿದರು.

‘ಮುಂದಿನ ಆದೇಶದ ತನಕವು ಯಾವುದೇ ಕ್ರಮ ಕೈಗೊಳ್ಳದಂತೆ ಸಿಟಿ ಸಿವಿಲ್‌ ಕೋರ್ಟ್‌ ಫೆ.1ರಂದು ತಡೆಯಾಜ್ಞೆ ನೀಡಿದೆ. ಅದರ ತೆರವಿಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.