ADVERTISEMENT

ಬೆಂಗಳೂರಲ್ಲಿ ಬಾಡಿಗೆ ಮನೆ–ಮಳಿಗೆ ಖಾಲಿ ಖಾಲಿ

ಎರಡು ತಿಂಗಳ ಬಾಡಿಗೆಯಷ್ಟು ಮುಂಗಡ ಮಾತ್ರ ಕೊಡಿ ಎಂದರೂ ಬರುತ್ತಿಲ್ಲ ಬಾಡಿಗೆದಾರರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 19:31 IST
Last Updated 19 ಜೂನ್ 2021, 19:31 IST
‘ಮನೆ ಬಾಡಿಗೆಗೆ ಇದೆ’ ಎಂಬ ಫಲಕಗಳು ನಗರದಲ್ಲಿ ಇತ್ತೀಚೆಗೆ ಸಾಮಾನ್ಯವಾಗಿವೆ –ಪ್ರಜಾವಾಣಿ ಚಿತ್ರ
‘ಮನೆ ಬಾಡಿಗೆಗೆ ಇದೆ’ ಎಂಬ ಫಲಕಗಳು ನಗರದಲ್ಲಿ ಇತ್ತೀಚೆಗೆ ಸಾಮಾನ್ಯವಾಗಿವೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸತತ ಎರಡನೇ ವರ್ಷವೂ ಮಹಾನಗರದಲ್ಲಿ ‘ಮನೆ ಬಾಡಿಗೆಗೆ ಇದೆ’ ಫಲಕಗಳು ಹೆಚ್ಚು ಕಾಣುತ್ತಿವೆ. ಮೊದಲ ಬಾರಿ ಲಾಕ್‌ಡೌನ್‌ ಆದಾಗಲೇ ಬೆಂಗಳೂರು ತೊರೆದವರ ಪೈಕಿ ಅನೇಕರು ಹಿಂದಿರುಗಿಲ್ಲ. ಈ ವರ್ಷವೂ ಲಾಕ್‌ಡೌನ್‌ ಮಾಡಿದ ನಂತರವೂ ಅನೇಕರು ಬೆಂಗಳೂರಿನಿಂದ ದೂರವೇ ಉಳಿದ ಪರಿಣಾಮ ನಗರದಲ್ಲಿ ಬಾಡಿಗೆ ಮನೆಗಳು ಖಾಲಿ ಉಳಿದಿವೆ.

ಈ ನಡುವೆ, ಕೇಂದ್ರ ಸರ್ಕಾರ ಮಾದರಿ ಹಿಡುವಳಿ ಕಾಯ್ದೆಯನ್ನೂ (ಮೋಡೆಲ್ ಟೆನೆನ್ಸಿ ಆ್ಯಕ್ಟ್‌) ಜಾರಿಗೆ ತಂದಿದೆ. ವರ್ಷದ ಬದಲಿಗೆ ಎರಡು ತಿಂಗಳ ಬಾಡಿಗೆಯ ಮೊತ್ತವನ್ನು ಮಾತ್ರ ಮುಂಗಡವಾಗಿ ಪಡೆಯಬಹುದು. ಈ ಕಾಯ್ದೆ ಜಾರಿ ನಂತರವೂ ಬಾಡಿಗೆಗೆ ಬರುವವರ ಸಂಖ್ಯೆ ಹೆಚ್ಚಾಗಿಲ್ಲ.

‘ವಸತಿ ಪ್ರದೇಶಗಳಲ್ಲಿ ಮುಖ್ಯವಾಗಿ ಒಂದು ಮತ್ತು ಎರಡು ಕೊಠಡಿಗಳ ಮನೆಗಳನ್ನು ಬಾಡಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಟೆನೆನ್ಸಿ ಕಾಯ್ದೆಯಲ್ಲಿರುವ ಅಂಶಗಳನ್ನು ಮಾಲೀಕರು ಈಗಲೂ ಪಾಲಿಸುತ್ತಿಲ್ಲ. ಊರಿಗೆ ಮರಳಿರುವ ಕಾರ್ಮಿಕರು, ನೌಕರರಲ್ಲಿ ಬಹುತೇಕರು ಇನ್ನೂ ಮರಳಿ ಬಂದೇ ಇಲ್ಲ’ ಎಂದು ಉದ್ಯಮಿ ಸುರೇಶ್‌ ಮಾನಂದಿ ಹೇಳಿದರು.

ADVERTISEMENT

‘ಹಲವು ಮಳಿಗೆಗಳನ್ನು ನಾನು ಬಾಡಿಗೆಗೆ ನೀಡಿದ್ದೇನೆ. ಆದರೆ, ಕಳೆದ ವರ್ಷದ ಬಾಡಿಗೆ ಹಣವನ್ನೇ ಕೆಲವರು ಇನ್ನೂ ನೀಡಿಲ್ಲ. ಲಾಕ್‌ಡೌನ್‌ ಅವಧಿ ಮುಗಿದು ಮತ್ತೆ ಅಂಗಡಿಗಳು ತೆರೆಯುವಂತಾದರೆ ಕಾರ್ಮಿಕರೆಲ್ಲ ವಾಪಸ್ ಬರಬಹುದು. ಅವರ ಬಳಿ ಹಣವೇ ಇಲ್ಲ. ಮನೆ ಅಥವಾ ಮಳಿಗೆಯಲ್ಲಿ ಜನ ಬಾಡಿಗೆಗೆ ಇದ್ದರೆ ಸಾಕು ಎಂಬ ಪರಿಸ್ಥಿತಿಯಿದ್ದು, ನಾನೂ ಬಾಡಿಗೆಗಾಗಿ ಒತ್ತಡ ಹೇರುತ್ತಿಲ್ಲ’ ಎಂದು ಅವರು ಹೇಳಿದರು.

‘ಮನೆ ಬಾಡಿಗೆ ದರವೇನೂ ಕಡಿಮೆಯಾಗಿಲ್ಲ. ಹೊಸ ಕಾಯ್ದೆ ಜಾರಿ ಬಗ್ಗೆಯೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಹೊಂದಾಣಿಕೆ–ನಂಬಿಕೆ ಮೇಲೆ ವ್ಯವಹಾರ ನಡೆಯುತ್ತಿದೆ. ಮನೆ ಮಾಲೀಕರು ಮುಂಗಡ ಹಣದಲ್ಲಿ ಸ್ವಲ್ಪ ಕಡಿಮೆ ತೆಗೆದುಕೊಳ್ಳುತ್ತಿದ್ದಾರೆಯೇ ವಿನಃ ಬಾಡಿಗೆ ಕಡಿಮೆ ಮಾಡುತ್ತಿಲ್ಲ’ ಎಂದು ದಲ್ಲಾಳಿ ಶಿವು ಹೇಳಿದರು.

‘ಹೊಸದಾಗಿ ಬಾಡಿಗೆಗೆ ಬರುತ್ತಿರುವವರು ಅಥವಾ ಹೊಸ ಅಗ್ರಿಮೆಂಟ್‌ ಮಾಡಿಕೊಳ್ಳುತ್ತಿರುವವರು ಟೆನೆನ್ಸಿ ಕಾಯ್ದೆ ಪಾಲನೆ ಮಾಡುತ್ತಿದ್ದಾರೆ. ಅವರಿಂದ 60 ದಿನಗಳ ಅವಧಿಯಷ್ಟು ಮಾತ್ರ ಮುಂಗಡ ಹಣ ತೆಗೆದುಕೊಳ್ಳುತ್ತಿದ್ದಾರೆ’ ಎಂದು ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘದ (ಕ್ರೆಡೈ) ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್ ತಿಳಿಸಿದರು.

‘ವಸತಿ ಉದ್ದೇಶದ ಕಟ್ಟಡಗಳಿಗಿಂತ, ವಾಣಿಜ್ಯ ಉದ್ದೇಶದ ಕಟ್ಟಡಗಳೇ ಹೆಚ್ಚು ಖಾಲಿ ಉಳಿದಿವೆ. ವಹಿವಾಟು ಕೂಡ ಹೆಚ್ಚು ನಡೆಯುತ್ತಿಲ್ಲ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.