ADVERTISEMENT

ಬೆಂಗಳೂರಿಗೆ ಹೊಸ ರೂಪ ನೀಡಲು ಯೋಜನೆ: ಡಿ.ಕೆ. ಶಿವಕುಮಾರ್‌

‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 15:51 IST
Last Updated 18 ಫೆಬ್ರುವರಿ 2024, 15:51 IST
ಯಶವಂತಪುರ ಮತ್ತು ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಿ.ಪಿ.ಇಡಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ಬಾಗಿಲಿಗೆ ಬಂತು ಸರ್ಕಾರ - ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಾರ್ವಜನಿಕರ ಅಹವಾಲು ಆಲಿಸಿದರು.
ಯಶವಂತಪುರ ಮತ್ತು ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಿ.ಪಿ.ಇಡಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ಬಾಗಿಲಿಗೆ ಬಂತು ಸರ್ಕಾರ - ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಾರ್ವಜನಿಕರ ಅಹವಾಲು ಆಲಿಸಿದರು.   

ಬೆಂಗಳೂರು: ‘ಬೆಂಗಳೂರಿಗೆ ಹೊಸ ರೂಪ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸದ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಿ.ಪಿ.ಇಡಿ ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ನಮ್ಮದೇ ಆದ ಯೋಜನೆಗಳಿವೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಮೆಟ್ರೊ ಸಂಚರಿಸುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಯಶವಂತಪುರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದೆ. ಸುಮನಹಳ್ಳಿ, ಗೊರಗುಂಟೆ ಪಾಳ್ಯ ಸೇರಿದಂತೆ ಇತರ ಕಡೆಗಳಲ್ಲಿ ಈ ಯೋಜನೆ ತರಲು ಸಿದ್ಧತೆ ಮಾಡುತ್ತಿದ್ದೇವೆ’ ಎಂದರು.

ಹಲವು ಸಮಸ್ಯೆ ಇತ್ಯರ್ಥ: ಮಾತು ಬಾರದ ಸುನೀತಾ ಬಾಯಿ ತನ್ನ ಮಗಳು ಅರ್ಪಿತಾ ಮೂಲಕ ಸಮಸ್ಯೆ ಹೇಳಿಕೊಂಡರು. ಮಗುವಿನ ವಾಕ್ಚಾತುರ್ಯಕ್ಕೆ ಮೆಚ್ಚುಗೆ ಸೂಚಿಸಿದ ಡಿ.ಕೆ. ಶಿವಕುಮಾರ್‌, ‘ಸುನೀತಾ ಬಾಯಿ ಅವರಿಗೆ ಪಿಂಚಣಿ ಮತ್ತು ಗೃಹಲಕ್ಷ್ಮೀ ಹಣ ಬರುವಂತೆ ವ್ಯವಸ್ಥೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆರ್.ಆರ್ ನಗರ ವಾಸಿ ಎರಡು ಕಾಲುಗಳಿಲ್ಲದ ರಾಜಪ್ಪ ಅವರು ಪೆಟ್ಟಿಗೆ ಅಂಗಡಿಯ ಬೇಡಿಕೆ ಇಟ್ಟಾಗ, ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

‘ಕೆಂಪೇಗೌಡ ಬಡಾವಣೆಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಮುನ್ನವೇ ನಮ್ಮ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದೆವು. ಆದರೂ ಮನೆ ಕೆಡವಲಾಗಿದೆ’ ಎಂದು ಚಂದ್ರಶೇಖರ್ ಅಲವತ್ತುಕೊಂಡರು.

ಪೀಣ್ಯದಲ್ಲಿ ಜೋಪಡಿ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಜಾಗದ ಮಾಲೀಕರಿಗೆ ತಿಂಗಳಿಗೆ ₹1 ಸಾವಿರ ಕಟ್ಟುತ್ತಿದ್ದೇವೆ ಎಂದು ರೇಣುಕಾ, ರಂಗಮ್ಮ, ಗುರುಬಾಯಿ, ಕವಿತಾ, ಶಾಂತಮ್ಮ ಸಚಿವರ ಬಳಿ ಹೇಳಿಕೊಂಡರು. ‘ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಿ, ಖುದ್ದಾಗಿ ನಾನೇ ಮನೆ ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ’ ಎಂದು ಸಚಿವರು ಆಶ್ವಾಸನೆ ನೀಡಿದರು.

’ಗಂಡ, ಮಕ್ಕಳಿಲ್ಲದ ನಾನು ಒಬ್ಬಂಟಿ. ನನ್ನ ಬಳಿ ಪಡಿತರ ಚೀಟಿ ಇಲ್ಲ’ ಎಂದು ಆರ್.ಆರ್.ನಗರದ ಸಿದ್ದಲಿಂಗಮ್ಮ ಕಣ್ಣೀರಿಟ್ಟಾಗ ‘ನಿಮ್ಮ ಜೊತೆಗೆ ನಮ್ಮ ಸರ್ಕಾರ ಇದೆ’ ಎಂದು ಸಮಾಧಾನ ಮಾಡಿದರು.

ತುರ್ತು ಕಾರ್ಯದ ನಿಮಿತ್ತ ಡಿ.ಕೆ.ಶಿವಕುಮಾರ್ ಅವರು ತೆರಳಿದ ನಂತರ ಸಂಸದ ಡಿ.ಕೆ.ಸುರೇಶ್ ಅವರು ಜನರ ಸಮಸ್ಯೆಗಳನ್ನು ಆಲಿಸಿದರು.

ಶಾಸಕರಾದ ಮುನಿರತ್ನ, ಎಸ್.ಟಿ. ಸೋಮಶೇಖರ್, ರಾಜ್ಯಸಭೆಯ ಮಾಜಿ ಸದಸ್ಯ ರಾಜೀವ್ ಗೌಡ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ಜಯರಾಮ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ವಲಯ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಅಧಿಕಾರಿಗಳು ಭಾಗವಹಿಸಿದ್ದರು.

ಡಿಸಿಎಂ ಹೊಗಳಿದ ಶಾಸಕರು

ಬಿಜೆಪಿ ಶಾಸಕರಾದ ಯಶವಂತಪುರ ಕ್ಷೇತ್ರದ ಎಸ್‌.ಟಿ. ಸೋಮಶೇಖರ್‌ ಮತ್ತು ಆರ್‌.ಆರ್. ನಗರ ಕ್ಷೇತ್ರದ ಮುನಿರತ್ನ ಇಬ್ಬರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಹೊಗಳಿದರು. ಸಂಸದ ಡಿ.ಕೆ. ಸುರೇಶ್‌ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಡಿ.ಕೆ. ಶಿವಕುಮಾರ್ ದೂರದೃಷ್ಟಿ ಹೊಂದಿದ್ದಾರೆ. ಬೆಂಗಳೂರಿಗೆ ಉತ್ತಮ ಕೊಡುಗೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.

‘ಜನಸ್ಪಂದನ ಸಭೆಗಳಲ್ಲಿ ಜನರ ಸಮಸ್ಯೆಗಳು ಪರಿಹಾರಗೊಳ್ಳುತ್ತಿವೆ. ನನ್ನ ಕ್ಷೇತ್ರದಲ್ಲಿ ಕಸ ವಿಲೇವಾರಿ ಸಮಸ್ಯೆ ನೀರಿನ ಸಮಸ್ಯೆಗಳೆಲ್ಲ ಮುಕ್ತಿ ಕಾಣುತ್ತಿವೆ. ಡಿ.ಕೆ. ಸಹೋದರರಿಬ್ಬರೂ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಸೋಮಶೇಖರ್‌ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.