ADVERTISEMENT

ಮಹದೇವಪುರ‌, ಪೂರ್ವ ವಲಯದಲ್ಲಿ ಮೊದಲು ಮಾರ್ಷಲ್‌ಗಳ ನೇಮಕ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:03 IST
Last Updated 20 ಜೂನ್ 2019, 19:03 IST

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ನಿವೃತ್ತ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಕ ಮಾಡಿಕೊಳ್ಳಲಿರುವ ಬಿಬಿಎಂಪಿ, ಮೊದಲು ಮಹದೇವಪುರ ವಲಯ ಹಾಗೂ ಪೂರ್ವ ವಲಯಗಳಲ್ಲಿ ಇವರನ್ನು ನಿಯೋಜಿಸಲಿದೆ.

ಮಾರ್ಷಲ್‌ಗಳನ್ನು ಒದಗಿಸುವ ಹೊಣೆಯನ್ನು ಕರ್ನಾಟಕ ನಿವೃತ್ತ ಸೈನಿಕರ ಸಂಘಕ್ಕೆ (ಕೆಇಎಸ್‌ಡಬ್ಲ್ಯುಎ) ವಹಿಸಲಾಗಿದೆ.

ಕೆಇಎಸ್‌ಡಬ್ಲ್ಯುಎ ಅಧ್ಯಕ್ಷ ಕರ್ನಲ್‌ ರಾಜಬೀರ್‌ ಸಿಂಗ್‌, ‘ಮಾರ್ಷಲ್‌ಗಳ ನೇಮಕಕ್ಕೆ ನಿವೃತ್ತ ಸೈನಿಕರನ್ನು ಪೂರೈಸಲು ನಮ್ಮ ಸಂಘವು ನೋಡಲ್‌ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. 240 ಮಾರ್ಷಲ್‌ಗಳನ್ನು ನಾವು ಒದಗಿಸಬೇಕಿದೆ. ಇದಕ್ಕಾಗಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸುತ್ತೇವೆ. ಹಂತಹಂತವಾಗಿ ಪಾಲಿಕೆಯ ಬೇಡಿಕೆ ಈಡೇರಿಸುತ್ತೇವೆ’ ಎಂದರು.

ADVERTISEMENT

‘ಮೊದಲ ಹಂತದಲ್ಲಿ ಪೂರ್ವ ವಲಯದ 44 ವಾರ್ಡ್‌ಗಳಲ್ಲಿ ಹಾಗೂ ಮಹದೇವಪುರ ವಲಯದ 17 ವಾರ್ಡ್‌ಗಳಲ್ಲಿ ಮಾರ್ಷಲ್‌ಗಳನ್ನು ನೇಮಿಸುತ್ತೇವೆ. ಈ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚು. ಹಾಗಾಗಿ ಮೊದಲು ಇಲ್ಲಿನ ಕಸದ ಸಮಸ್ಯೆಗಳನ್ನು ನೀಗಿಸಲು ಆದ್ಯತೆ ನೀಡಬೇಕಾಗಿದೆ. ಜುಲೈ ಮೊದಲ ವಾರ ಮಾರ್ಷಲ್‌ಗಳು ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ’ ಎಂದರು.

ಬಿಬಿಎಂಪಿಯು ಎಂಟು ವಲಯಗಳ ನಿಯಂತ್ರಣ ಕೊಠಡಿಗಳಿಗೂ ಮಾರ್ಷಲ್‌ಗಳನ್ನು ನಿಯೋಜಿಸಲಿದೆ. ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಾರ್ಷಲ್‌ಗಳೊಂದಿಗೆ ಸಮನ್ವಯ ಸಾಧಿಸಲು ಅವರು ನೆರವಾಗಲಿದ್ದಾರೆ.

‘ನಿಯಂತ್ರಣ ಕೊಠಡಿಗಳಿಗೆ ತಲಾ ಮೂವರು ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತದೆ.ಅವರು ಜನರಿಂದ ಬರುವ ದೂರುಗಳನ್ನು ಆಧರಿಸಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಾರ್ಷಲ್‌ಗಳಿಗೆ ಮಾಹಿತಿ ರವಾನಿಸುತ್ತಾರೆ. ಬೇರೆ ಬೇರೆ ಪಾಳಿಯಲ್ಲಿ ಅವರು ಕೆಲಸ ಮಾಡಲಿದ್ದಾರೆ’ ಎಂದು ಸಿಂಗ್‌ ವಿವರಿಸಿದರು.

ಎನ್‌ಸಿಸಿ ತರಬೇತಿ ಪಡೆದವರನ್ನೂ ಮಾರ್ಷಲ್‌ಗಳನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ. ಮಾರ್ಷಲ್‌ಗಳ ಒಟ್ಟು ಸಂಖ್ಯೆಯಲ್ಲಿ ಶೇ 50ರಷ್ಟು ಮಂದಿ ಎನ್‌ಸಿಸಿ ತರಬೇತಿ ಪಡೆದವರು ಇರುತ್ತಾರೆ.

ಪಾಲಿಕೆ ಈ ಹಿಂದೆಯೇ 83 ಮಾರ್ಷಲ್‌ಗಳನ್ನು ಕೆಇಎಸ್‌ಡಬ್ಲ್ಯುಎ ಮೂಲಕ ನೇಮಿಸಿಕೊಂಡಿತ್ತು. ಇಂದಿರಾ ಕ್ಯಾಂಟೀನ್‌ಗಳಿಗೆ ಭದ್ರತೆ ಒದಗಿಸಲು ಇವರನ್ನು ಬಳಸಲಾಗುತ್ತಿದೆ. ನಿವೃತ್ತ ಸೈನಿಕರಿಗೆ ತಿಂಗಳಿಗೆ ₹ 25 ಸಾವಿರ ಹಾಗೂ ಎನ್‌ಸಿಸಿ ತರಬೇತಿ ಪಡೆದ ಯುವಕರಿಗೆ ತಿಂಗಳಿಗೆ ₹ 18 ಸಾವಿರ ಪಾವತಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.