ಬೆಂಗಳೂರು: ಮುಂಗಾರು ಮಳೆ ಪ್ರಾರಂಭವಾಗುವ ಅವಧಿ ಸಮೀಪಿಸುತ್ತಿರುವುದರಿಂದ ನಗರದಲ್ಲಿ 15 ದಿನದ ‘ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ’ವನ್ನು ಬಿಬಿಎಂಪಿ ಹಮ್ಮಿಕೊಂಡಿದೆ.
ಮುಂಗಾರು ಪೂರ್ವ ಮಳೆ ಆರಂಭದ ಹಿನ್ನೆಲೆ ರಾಜಕಾಲುವೆಗಳಲ್ಲಿ ಹೂಳೆತ್ತುವುದು, ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಬದಿಯ ಚರಂಡಿ ಸ್ವಚ್ಛತೆ, ವಾರ್ಡ್ ಮಟ್ಟದಲ್ಲಿ ಈಗಾಗಲೇ ಗುರುತಿಸಲಾಗಿರುವ ಸಂಪರ್ಕ ಚರಂಡಿಗಳಿಂದ ಹೂಳೆತ್ತುವಂತಹ ಮುಂಜಾಗ್ರತಾ ಕ್ರಮಗಳನ್ನು ಏಪ್ರಿಲ್ 19ರಿಂದ ಆರಂಭಿಸಲಾಗಿದ್ದು, ಮೇ 3ರವರೆಗೆ ನಡೆಸಲಾಗುವುದು.
ಈ ಸ್ವಚ್ಛತಾ ಕಾರ್ಯದ ಜವಾಬ್ದಾರಿಯನ್ನು ಮುಖ್ಯ ಎಂಜಿನಿಯರ್‌ಗಳಿಗೆ ವಹಿಸಿ, ಕೈಗೊಂಡ ಕ್ರಮಗಳ ವಿವರವನ್ನು ಪ್ರತಿನಿತ್ಯವೂ ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ವಲಯ ಮುಖ್ಯ ಎಂಜಿನಿಯರ್: ವಾರ್ಡ್‌ಮಟ್ಟದಲ್ಲಿ ರಾಜಕಾಲುವೆಗಳ ಸಂಪರ್ಕ ಚರಂಡಿ, ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಿಂದ ಹೂಳೆತ್ತುವುದು. ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿ ಮಾಡುವುದು. ರಸ್ತೆ ಗುಂಡಿ, ಚರಂಡಿಗಳನ್ನು ದುರಸ್ತಿಪಡಿಸುವುದು.
ರಸ್ತೆ ಮೂಲಸೌಕರ್ಯ ಮುಖ್ಯ ಎಂಜಿನಿಯರ್: ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಚರಂಡಿ ಸ್ವಚ್ಛತೆ, ಅನುಪಯುಕ್ತ ಕಟ್ಟಡ ತ್ಯಾಜ್ಯ ತೆರವುಗೊಳಿಸುವುದು. ಯಂತ್ರಗಳಿಂದ ರಸ್ತೆ ಕಸ ಗುಡಿಸುವುದು. ಮೇಲ್ಸೇತುವೆ ಮತ್ತು ಕೆಳಸೇತುವೆಗಳಲ್ಲಿ ನೀರು ನಿಲ್ಲುವುದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವುದು. ರಸ್ತೆ ಗುಂಡಿಗಳನ್ನು ದುರಸ್ತಿಪಡಿಸುವುದು.
ಬೃಹತ್ ನೀರುಗಾಲುವೆ ಮುಖ್ಯ ಎಂಜಿನಿಯರ್: ರಾಜಕಾಲುವೆಗಳ ನಿರ್ವಹಣೆ. ಸೇತುವೆ ಮತ್ತು ಅಡಿಗಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛಗೊಳಿಸುವುದು. ವಾರ್ಷಿಕ ನಿರ್ವಹಣೆಯ ಗುತ್ತಿಗೆದಾರರು ‘ಸರ್ವಸನ್ನದ್ಧರಾಗಿ’ ಇರುವಂತೆ ಸೂಚಿಸುವುದು. ನೀರಿನ ಮಟ್ಟದ ಸೆನ್ಸಾರ್ ಕ್ಯಾಮೆರಾಗಳ ಸ್ಥಿತಿ ಬಗ್ಗೆ ವರದಿ ನೀಡುವುದು. ರಾಜಕಾಲುವೆಗಳಿಗೆ ಘನತ್ಯಾಜ್ಯ ಹಾಕುತ್ತಿರುವ ಸ್ಥಳಗಳನ್ನು ಗುರುತಿಸಿ ಘನತ್ಯಾಜ್ಯ ವಿಭಾಗ ಮುಖ್ಯ ಎಂಜಿನಿಯರ್ ಅವರಿಗೆ ತಿಳಿಸುವುದು.
ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್: ಕೆರೆಗಳನ್ನು ಸಂಪರ್ಕಿಸುವ ಹಾಗೂ ಹೊರಹೋಗುವ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದು. ಕೆರೆಗಳಲ್ಲಿ ಶೇಖರಣೆಯಾಗಿರುವ ಮತ್ತು ಶೇಖರಣೆಯಾಗಬಹುದಾದ ನೀರಿನ ಸಾಮರ್ಥ್ಯ, ತೂಬು ನಿರ್ವಹಣೆಯ ವಿವರ ಒದಗಿಸುವುದು. ಕೆರೆಗಳಲ್ಲಿ ಬೆಳೆದಿರುವ ಲಂಟಾನ ಗಿಡಗಳನ್ನು ಸ್ವಚ್ಛಗೊಳಿಸುವುದು.
ಯೋಜನೆ– ಕೇಂದ್ರ ವಿಭಾಗದ ಮುಖ್ಯ ಎಂಜಿನಿಯರ್: ಪ್ರಮುಖ ಪ್ರದೇಶ, ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಡೆಯುವುದು.
ಘನತ್ಯಾಜ್ಯ ಮುಖ್ಯ ಎಂಜಿನಿಯರ್: ಘನತ್ಯಾಜ್ಯ ಸಂಗ್ರಹ, ಸಾಗಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು. ರಾಜಕಾಲುವೆಗಳಿಗೆ ಘನತ್ಯಾಜ್ಯ ಹಾಕುವುದನ್ನು ತಪ್ಪಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.