ಬೆಂಗಳೂರು: ಕೊರೊನಾ ಬಗ್ಗೆ ಜನರಲ್ಲಿ ಮನೆ ಮಾಡಿರುವ ಆತಂಕವನ್ನೇ ಬಂಡವಾಳ ಮಾಡಿಕೊಂಡು ನಕಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಉತ್ಪಾದಿಸಿ ಭಾರಿ ಹಣ ಗಳಿಸುತ್ತಿರುವ ಜಾಲಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಸೋಮವಾರ ರಾತ್ರಿ ಎಚ್‌ಆರ್‌ಬಿಆರ್ ಬಡಾವಣೆಯ ಗೋದಾಮೊಂದರ ಮೇಲೆ ದಾಳಿ ಮಾಡಿ 12,300 ನಕಲಿ ಎನ್–95 ಮಾಸ್ಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಚ್‌ಆರ್‌ಬಿಆರ್ ಬಡಾವಣೆ ZIS ಎಂಜಿನಿಯರಿಂಗ್, ಬಿಎನ್‌ಸಿ ಬೆಂಗಳೂರು ಡಯಾಬಿಟಿಕ್ ಸೆಂಟರ್, ಎರಡನೇ ಮಹಡಿ, ನಂಬರ್ 4ಡಿಸಿ/544, 6ನೇ ಎ ಮುಖ್ಯ ರಸ್ತೆ, 4ನೇ ಡಿ ಕ್ರಾಸ್, ಕಲ್ಯಾಣ ನಗರದ ಗೋದಾಮಿನಲ್ಲಿ 12,300 ಮಾಸ್ಕ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಗರ್ ಎಂಬಾತನನ್ನು ಬಂಧಿಸಲಾಗಿದ್ದು, ಅಮೀರ್ ಅರ್ಷದ್ ಎಂಬಾತ ಪರಾರಿಯಾಗಿದ್ದಾನೆ. ವಶಪಡಿಸಿಕೊಂಡ ಮಾಸ್ಕ್‌ಗಳ ಬೆಲೆ ₹ 20 ಲಕ್ಷ. ಈಗಾಗಲೇ ₹ 1.05ಕೋಟಿ ಮೌಲ್ಯದ 70 ಸಾವಿರ ಮಾಸ್ಕ್‌ಗಳನ್ನು ಆರೋಪಿಗಳು ಮಾರಾಟ ಮಾಡಿರುವ ದಾಖಲೆ ಪೊಲೀಸರಿಗೆ ಸಿಕ್ಕಿದೆ.
ಅನಧಿಕೃತವಾಗಿ 2.5ಲಕ್ಷಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಆರೋಪಿಗಳು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಸಾಧಾರಣ ಬನಿಯನ್ ಬಟ್ಟೆಗೆ ಶರ್ಟ್ ಕಾಲರ್‌ಗೆ ಬಳಸುವ ಕ್ಯಾನ್ವಾಸ್ ಸೇರಿಸಿ ಹೊಲಿದು ಎನ್– 95 ಸೀಲ್ ಹಾಕಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರತಿ ಮಾಸ್ಕ್ ತಯಾರಿಕೆಗೆ ₹ 18 ಖರ್ಚು ಮಾಡಿ ₹ 200ಕ್ಕೂ ಹೆಚ್ಚು ದರಕ್ಕೆ ಮಾರುತ್ತಿದ್ದರು. ಇದೇ ಮಾಸ್ಕ್‌ಗಳನ್ನು ಸಗಟಾಗಿ ಸರ್ಕಾರಕ್ಕೂ ಪೂರೈಸಲು ಪ್ರಯತ್ನಿಸಿದ್ದರು. ಈ ಉದ್ದೇಶಕ್ಕೆ ಮಧ್ಯವರ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಪ್ರಮುಖ ಆರೋಪಿಯನ್ನು ಹಿಡಿದರೆ ಇದರ ಮಾಹಿತಿಯೂ ಸಿಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಸಿಸಿಬಿಯ ಆರ್ಥಿಕ ಅಪರಾಧ ತನಿಖಾ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.