ADVERTISEMENT

250 ಉಪಕರಣ ಪತ್ತೆ: 16 ಮಂದಿ ವಿಚಾರಣೆ

ಕಾಂಗ್ರೆಸ್ ಮುಖಂಡನ ಕಚೇರಿ ಮೇಲೆ ಚುನಾವಣಾಧಿಕಾರಿ, ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 19:38 IST
Last Updated 15 ಏಪ್ರಿಲ್ 2019, 19:38 IST
ಜಪ್ತಿ ಮಾಡಲಾದ ಉಪಕರಣಗಳು
ಜಪ್ತಿ ಮಾಡಲಾದ ಉಪಕರಣಗಳು   

ಬೆಂಗಳೂರು: ಕೆ.ಜಿ.ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್‌ನಲ್ಲಿರುವ ಕಾಂಗ್ರೆಸ್ ಮುಖಂಡಇಬ್ರಾಹಿಂ ಖಲೀಲುಲ್ಲಾ ಅವರ ಕಚೇರಿ ಮೇಲೆ ಸೋಮವಾರ ಸಂಜೆ ದಾಳಿ ಮಾಡಿದ ಚುನಾವಣಾ ಅಧಿಕಾರಿಗಳು ಹಾಗೂ ಉಪ್ಪಾರಪೇಟೆ ಪೊಲೀಸರು, 250 ಅನುಮಾನಾಸ್ಪದ ಉಪಕರಣಗಳನ್ನು ಜಪ್ತಿ ಮಾಡಿದರು.

ಬಿಜೆಪಿ ಕಾರ್ಯಕರ್ತರ ನೀಡಿದ್ದ ದೂರಿನಂತೆ ದಾಳಿ ನಡೆಸಿದ್ದ ಅಧಿಕಾರಿಗಳು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್‌ಗಳು ಸೇರಿದಂತೆ 16 ಮಂದಿಯನ್ನು ವಶಕ್ಕೆ ಪಡೆದು ಉಪ್ಪಾರಪೇಟೆ ಠಾಣೆಗೆ ಕರೆದೊಯ್ದು ತಡರಾತ್ರಿಯವರೆಗೂ ವಿಚಾರಣೆ ನಡೆಸಿದರು.

ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ಕುಮಾರ್ ಮೀನಾ ಹಾಗೂ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಸಹ ಕಚೇರಿ ಹಾಗೂ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ADVERTISEMENT

ದಾಳಿ ಸುದ್ದಿ ತಿಳಿದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಠಾಣೆಯ ಹೊರಗಡೆ ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮತದಾರರ ಮಾಹಿತಿ ತಿಳಿಯಲು ಬಳಕೆ: ‘ಮತದಾರರ ಹೆಸರು, ವಿಳಾಸ ಹಾಗೂ ಅವರ ಮತಗಟ್ಟೆಯ ಮಾಹಿತಿ ತಿಳಿಯುವುದಕ್ಕಾಗಿ ಉಪಕರಣ ಬಳಕೆ ಮಾಡುತ್ತಿದ್ದರು. ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ್ದ ಕಾಂಗ್ರೆಸ್‌ನವರು, ಆ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸಿದ್ದರು. ‘ಪಿಎಚ್‌ಐ’ ಹೆಸರಿನ ಆ್ಯಪ್‌ ಮೂಲಕ ಉಪಕರಣ ಕಾರ್ಯನಿರ್ವಹಿಸುತ್ತಿತ್ತು’ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

‘ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಕ್ಷೇತ್ರದಲ್ಲಿ ವಾಸವಿಲ್ಲದವರನ್ನು ಸಂಪರ್ಕಿಸಲು ಹಾಗೂ ಅಂಥವರನ್ನು ಮತದಾನಕ್ಕೆ ಕರೆತರುವುದಕ್ಕಾಗಿ ಉಪಕರಣದ ಮಾಹಿತಿಯನ್ನು ಬಳಸಲಾಗುತ್ತಿತ್ತು. ಸದ್ಯ ಪ್ರಕರಣ ಸಂಬಂಧ ನಗರ ಪೊಲೀಸ್ ಕಮಿಷನರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದರು.

‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದೆವು’ ಎಂದು ಆರೋಪಿಗಳು ಹೇಳಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಹೇಳಿದರು.

‘ನಕಲಿ ಮತದಾನಕ್ಕೆ ಕಾಂಗ್ರೆಸ್ ತಯಾರಿ‘

‘ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್, ನಕಲಿ ಮತದಾನಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಈಗ ಸಿಕ್ಕಿರುವ ಉಪಕರಣಗಳನ್ನು ಅದೇ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿತ್ತು’ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಆರೋಪಿಸಿದರು.

ಉಪ್ಪಾರಪೇಟೆ ಠಾಣೆಗೆ ಸೋಮವಾರ ರಾತ್ರಿ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಕ್ರಮದ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ನಡೆದ ದಾಳಿಯಲ್ಲಿ 20 ಕಂಪ್ಯೂಟರ್, ಸ್ಕ್ಯಾನರ್, ಪ್ರೀಂಟರ್ ಸಿಕ್ಕಿವೆ’ ಎಂದರು.

’ಸಂಜೆ 6 ಗಂಟೆಗೆ ದಾಳಿ ನಡೆದಿದೆ. ರಾತ್ರಿ 11 ಗಂಟೆಯಾದರೂ ದಾಳಿ ಬಗ್ಗೆ ಪೊಲೀಸರಾಗಲಿ, ಚುನಾವಣಾಧಿಕಾರಿಯಾಗಲಿ ಮಾಹಿತಿ ನೀಡುತ್ತಿಲ್ಲ’ ಎಂದು ದೂರಿದರು.

ಕಾಂಗ್ರೆಸ್ ಆಕ್ರೋಶ

ಉಪ್ಪಾರಪೇಟೆ ಠಾಣೆ ಎದುರು ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪರವಾಗಿ ಮತ ಚಲಾಯಿಸುವಂತೆ ಪ್ರಚೋದಿಸಿ, ಮತದಾರರಿಗೆ ಮತ ಚೀಟಿಗಳನ್ನು ವಿತರಿಸಲಾಗಿದೆ. ಇದು ಚುನಾವಣಾ ಅಕ್ರಮ. ಮೋಹನ್ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.