ADVERTISEMENT

ಕೆನೆಪದರ ಮೀಸಲಾತಿಗೆ ಮಾವಳ್ಳಿ ಶಂಕರ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 15:59 IST
Last Updated 2 ಆಗಸ್ಟ್ 2024, 15:59 IST
ಮಾವಳ್ಳಿ ಶಂಕರ್‌
ಮಾವಳ್ಳಿ ಶಂಕರ್‌   

ಬೆಂಗಳೂರು: ಕೆನೆಪದರಕ್ಕೆ ಮೀಸಲಾತಿ ಸೌಲಭ್ಯ ನಿರಾಕರಿಸಲು ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್‌ ಸೂಚಿಸಿರುವುದು ಸರಿಯಾದ ತೀರ್ಮಾನವಲ್ಲ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.

ಬಹಳ ವರ್ಷಗಳ ಹೋರಾಟದ ನಂತರ ಒಳಮೀಸಲು ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದು ಸ್ವಾಗತಾರ್ಹ. ಅದರ ಜೊತೆಗೆ ಕೆನೆಪದರಕ್ಕೆ ಮೀಸಲಾತಿ ನಿರಾಕರಿಸಲು ನೀತಿ ಮಾಡುವಂತೆ ಸೂಚಿಸಿರುವುದು ಸರಿಯಲ್ಲ. ಆದಾಯ ಮಿತಿ ಹಾಕಿದರೆ ಬಹುತೇಕರು ಮೀಸಲಾತಿಯಿಂದ ಹೊರಗೆ ಉಳಿಯುತ್ತಾರೆ. ಮೀಸಲಾತಿಯ ಉದ್ದೇಶಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಹಿಂದೆ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರ ಬಂದಾಗ ಸುಪ್ರೀಂ ಕೋರ್ಟ್‌ ಹಿಂದುಳಿದ ವರ್ಗಗಳ ಜೊತೆಗೆ ಎಸ್‌ಸಿ–ಎಸ್‌ಟಿ ಸಮುದಾಯಗಳಿಗೂ ಕೆನೆಪದರ ನಿಗದಿಪಡಿಸಿ ಆದೇಶ ಮಾಡಿತ್ತು. ಅದನ್ನು ವಿರೋಧಿಸಿ ದೊಡ್ಡ ಮಟ್ಟದ ಹೋರಾಟಗಳಾಗಿದ್ದವು. ಆಗಿನ ವಾಜಪೇಯಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೆನೆಪದರ ಅನ್ವಯವಾಗುವುದಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ಮಾಡಿತ್ತು. ತನ್ನ ಹಿಂದಿನ ತೀರ್ಪನ್ನು ಸಂವಿಧಾನ ಪೀಠ ತಿರಸ್ಕರಿಸಿರುವುದನ್ನು ಸುಪ್ರೀಂಕೋರ್ಟ್ ಪರಿಗಣಿಸಬೇಕಿತ್ತು ಎಂದು ಹೇಳಿದ್ದಾರೆ.

ADVERTISEMENT

ಕೇಂದ್ರದಲ್ಲಿ 60 ಲಕ್ಷ, ರಾಜ್ಯದಲ್ಲಿ 3 ಲಕ್ಷ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು. 15 ವರ್ಷಗಳಿಂದ  ಭರ್ತಿ ಮಾಡದೇ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.