ಬೆಂಗಳೂರು: ಹಲವಾರ ತ್ಯಾಗ, ಬಲಿದಾನ ಮತ್ತು ಹೋರಾಟಗಳಿಂದ ಚಾರಿತ್ರಿಕವಾಗಿ ‘ಮೇ ದಿನ’ದಂದು ಗಳಿಸಿದ್ದ ಎಂಟು ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿರುವ ಸರ್ಕಾರದ ನಡೆಯನ್ನು ವಿರೋಧಿಸುವ ಮೂಲಕ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು) ಬುಧವಾರ ಕಾರ್ಮಿಕ ದಿನ ಆಚರಿಸಿತು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ‘ಮೇ ದಿನಾಚರಣೆ‘ಯ ಸಾರ್ವಜನಿಕ ಸಭೆಯಲ್ಲಿ ಸಾವಿರಾರು ಕಾರ್ಮಿಕರು ಕೆಂಪು ಬಟ್ಟೆ ಧರಿಸಿ ಪಾಲ್ಗೊಂಡಿದ್ದರು.
‘ಕಾರ್ಮಿಕ ಸಮುದಾಯದ ಮೇಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ದಮನ ಹಾಗೂ ದಬ್ಬಾಳಿಕೆಗಳು ನಡೆಯುತ್ತಿವೆ. ಜಾಗತಿಕವಾಗಿ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳು ಯುದ್ಧ ಮತ್ತು ಅರಾಜಕತೆಯನ್ನು ಸೃಷ್ಟಿಸಿವೆ. ಇದಕ್ಕೆ ಇಸ್ರೇಲ್–ಪ್ಯಾಲಿಸ್ಟೀನ್, ರಷ್ಯಾ–ಯುಕ್ರೇನ್ ಯುದ್ಧಗಳೇ ಸಾಕ್ಷಿ. ಅದೇ ರೀತಿ ದೇಶದಲ್ಲೂ ಸಹ ಬಿಜೆಪಿ ನೇತೃತ್ವದ ಬಲಪಂಥೀಯ ಸರ್ಕಾರ 10 ವರ್ಷಗಳ ದುರಾಡಳಿತದಲ್ಲಿ ಕಾರ್ಮಿಕ ವರ್ಗದ ಬದುಕನ್ನು ಛಿದ್ರಗೊಳಿಸಿದೆ. ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿದೆ’ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.
‘1990ರಲ್ಲಿ ದೇಶದಲ್ಲಿ ಅನುಷ್ಠಾನಗೊಂಡ ಹೊಸ ಆರ್ಥಿಕ ನೀತಿಯ ಪರಿಣಾಮ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ಆದವು. ಈ ಬೆಳವಣಿಗೆ ಕಾರ್ಮಿಕ ಸಮುದಾಯವನ್ನು ಶೋಷಣೆಗೆ ತಳ್ಳಿತು. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ವಸತಿ ಎಲ್ಲವೂ ಕೈಗೆಟುಕದಂತೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿವೆ. ಅವರ ಆಸ್ತಿ ದುಪ್ಪಟ್ಟಾಗಿದ್ದು, ಜನಸಾಮಾನ್ಯರ ಆದಾಯ ನೆಲಕಚ್ಚಿದೆ. ಸುಳ್ಳನ್ನು ಬಂಡವಾಳ ಮಾಡಿಕೊಂಡು ಕೇಂದ್ರ ಸರ್ಕಾರ ಜನರನ್ನು ದಾರಿ ತಪ್ಪಿಸಿ ಭಾವನಾತ್ಮಕ ವಿಷಯಗಳನ್ನು ಮುನ್ನಡೆಗೆ ತಂದು ಕಾರ್ಮಿಕರ ಏಕತೆಗೆ ಧಕ್ಕೆ ತರುತ್ತಿದೆ’ ಎಂದರು.
‘ನಾಲ್ಕು ಕಾರ್ಮಿಕ ಸಂಹಿತೆ (ಕೋಡ್)ಗಳನ್ನು ಜಾರಿಗೊಳಿಸಿ ಮುಷ್ಕರದ ಹಕ್ಕು ಕಸಿದುಕೊಳ್ಳುತ್ತಿದೆ. ನಿಗದಿತ ಅವಧಿಯ ಉದ್ಯೋಗ, ಗುತ್ತಿಗೆ ಪದ್ಧತಿಯಲ್ಲಿ ಕಾರ್ಮಿಕರನ್ನು ನೇಮಕಾತಿ ಮಾಡಿಕೊಂಡು ಬೇಕಾದಾಗ ಬಳಸಿ ಬಿಸಾಡಲು ಈ ಕೋಡ್‌ಗಳು ಅನುಮತಿ ನೀಡುತ್ತವೆ’ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಆರೋಪಿಸಿದರು.
‘ಮುಂಬರುವ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಮುಂದುವರೆಯಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟವನ್ನು ಮುಂದುವರಿಸುವ ಪಣವನ್ನು ನಾವಿಂದು ತೆಗೆದುಕೊಳ್ಳಬೇಕಿದೆ. ಇದು ಮೇ ದಿನದ ಘೋಷಣೆಯಾಗಲಿ’ ಎಂದು ತಿಳಿಸಿದರು.
ಕಾನೂನು ತಜ್ಞ ಬಾಬು ಮ್ಯಾಥ್ಯೂ, ಜೆ.ಸಿ.ಟಿ.ಯುನ ರಾಜ್ಯ ಸಂಚಾಲಕ ಕೆ.ವಿ. ಭಟ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಮೈಕಲ್ ಫರ್ನಾಂಡಿಸ್, ಶಾಮಣ್ಣ ರೆಡ್ಡಿ, ಕೆ.ಎನ್. ಉಮೇಶ್, ಎಂ.ಜೆಡ್. ಅಲಿ, ರಮಾ ಟಿ.ಸಿ., ಜಿ.ಆರ್. ಶಿವಶಂಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.