ಬೆಂಗಳೂರು: ‘ಬನ್ನೇರುಘಟ್ಟ ರಸ್ತೆ ವಿಸ್ತರಣೆಯ ಯೋಜನೆಯ ಅನುದಾನದ ಮೊತ್ತವನ್ನು ಹೆಚ್ಚಳ ಮಾಡಿಲ್ಲ. ಈ ಕಾಮಗಾರಿಗೆ ಮಂಜೂರಾದ ಹಣ ದುರ್ಬಳಕೆ ಆಗಿಲ್ಲ’ ಎಂದು ಮೇಯರ್ ಗಂಗಾಂಬಿಕೆ ಸ್ಪಷ್ಟಪಡಿಸಿದ್ದಾರೆ.
‘ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ₹150 ಕೋಟಿ ಇದ್ದ ಯೋಜನಾ ಮೊತ್ತ ಈಗ ₹200 ಕೋಟಿಗೆ ಏರಿದೆ.ಪಾಲಿಕೆಗೆ ₹50 ಕೋಟಿ ಹೊರೆಯಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಗುತ್ತಿಗೆ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
‘ನಗರೋತ್ಥಾನ ಯೋಜನೆಯಡಿ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ 7.44 ಕಿ.ಮೀ. ಉದ್ದದವರೆಗೆ ಆರು ಪಥಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆಯ ಅಗಲ ಕೆಲವು ಕಡೆ 23 ಮೀಟರ್ ಇನ್ನು ಕೆಲವೆಡೆ ಕೆಲವೆಡೆ 24 ಮೀಟರ್ ಇದೆ. ಈಗ ಆರು ಮಾರ್ಗಗಳ ಜೊತೆಗೆ, ರಸ್ತೆಯ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ, ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಂದೊಂದು ಪಥವೂ ತಲಾ 3.5 ಮೀಟರ್ ಇರುತ್ತದೆ. ರಸ್ತೆಯ ಮಧ್ಯೆ 3 ಮೀಟರ್ ಅಗಲದ ವಿಭಜಕವನ್ನೂ ನಿರ್ಮಿಸಲಾಗುತ್ತಿದೆ. ಇವೆಲ್ಲಕ್ಕೂ ಸೇರಿ ಯೋಜನಾ ಮೊತ್ತ ₹152 ಕೋಟಿ ಆಗಿದೆ. ಇದನ್ನು ಹೆಚ್ಚಳ ಮಾಡಿಲ್ಲ’ ಎಂದು ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಎಸ್. ಸೋಮಶೇಖರ ತಿಳಿಸಿದರು.
‘ಕೆಲಸ ನಡೆಯುತ್ತಿದೆ. ಗುತ್ತಿಗೆದಾರರಿಗೆ ಈವರೆಗೆ ₹40 ಕೋಟಿ ಪಾವತಿಸಲಾಗಿದೆ. ಶೇ 40ರಷ್ಟು ಕಾಮಗಾರಿ ನಡೆದಿದೆ. ಒಟ್ಟು ಯೋಜನಾ ಮೊತ್ತದ ಶೇ 20ರಷ್ಟು ಹಣವನ್ನು ಮಾತ್ರ ಪಾವತಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಸದ್ಯ ಸರ್ಕಾರದ ಭೂಮಿ ಮತ್ತು ಟಿಡಿಆರ್ ನೀಡುವ ಮೂಲಕ ಸ್ವಾಧೀನಪಡಿಸಿಕೊಂಡ ಭೂಮಿ ಸೇರಿ ಒಟ್ಟು 10 ಎಕರೆ ಲಭ್ಯವಿದೆ. ಈ ಮಾರ್ಗದಲ್ಲಿ ಸರ್ವೀಸ್ ರಸ್ತೆ ಅಭಿವೃದ್ಧಿ ಮಾಡುವುದಕ್ಕೆ 34 ಎಕರೆ ಬೇಕಾಗುತ್ತದೆ. ಅಂದರೆ, ಇನ್ನೂ 24 ಎಕರೆ ಭೂಮಿ ಬೇಕು’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.