ಬೆಂಗಳೂರು: ಮೇಯರ್ ಎಂ.ಗೌತಮ್ ಕುಮಾರ್ ಅಧಿಕಾರಾವಧಿ ಗುರುವಾರಕ್ಕೆ ಕೊನೆಗೊಂಡಿದೆ. ಅಧಿಕಾರವಧಿಯ ಸಿಹಿ–ಕಹಿ ನೆನಪುಗಳನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.
* ಮೇಯರ್ ಹೊಣೆ ನಿಭಾಯಿಸಿದ ರೀತಿ ತೃಪ್ತಿ ತಂದಿಯೇ?
ಹೊಣೆಯನ್ನು ಚೆನ್ನಾಗಿ ನಿಭಾಯಿಸಿದ್ದೇನೆ. ನನ್ನ ಬಹುತೇಕ ಕೆಲಸಗಳು ತೃಪ್ತಿ ತಂದಿವೆ. ಕೆಲವು ವಿಚಾರಗಳಲ್ಲಿ ನಿರಾಸೆಯೂ ಇದೆ.
* ಹೆಚ್ಚು ತೃಪ್ತಿ ಕೊಟ್ಟ ಕೆಲಸ ಯಾವುದು?
ಬಿಬಿಎಂಪಿ ಎಲ್ಲರನ್ನು ಜೋಡಿಸಿಕೊಂಡು ಕೋವಿಡ್‌ನಂತಹ ಸವಾಲನ್ನು ಸಮರ್ಥವಾಗಿ ನಿರ್ವಹಿಸಿದ ಬಗ್ಗೆ ಸಂತೃಪ್ತಿ ಇದೆ. ಬನ್ನೇರುಘಟ್ಟ ರಸ್ತೆ ಬಳಿ ಒತ್ತುವರಿಯಾಗಿದ್ದ ₹ 600 ಕೋಟಿ ಬೆಲೆಯ 10 ಎಕರೆಯನ್ನು ಮರಳಿ ಬಿಬಿಎಂಪಿ ವಶಕ್ಕೆ ಪಡೆದದ್ದು ನಮಗೆ ಸಿಕ್ಕ ದೊಡ್ಡ ಯಶಸ್ಸು.
* ಒತ್ತುವರಿಯಾದ ಆಸ್ತಿಗಳ ಮರುಸ್ವಾಧೀನ ಪೂರ್ಣಗೊಳ್ಳಲೇ ಇಲ್ಲವಲ್ಲ?
ಬಿಬಿಎಂಪಿ ಆಸ್ತಿಗಳು ಒತ್ತುವರಿ ಪತ್ತೆ ಹಚ್ಚಿ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಕೆಲವು ಸಭೆಗಳನ್ನು ನಡೆಸಿದ್ದೆ. ಒತ್ತುವರಿ ತೆರವು ನಿರಂತರ ಮುಂದುವರಿಯಲಿದೆ.
* ನಿಮಗೆ ನಿರಾಸೆ ತಂದ ವಿಷಯ ಯಾವುದು?
ನಗರದ 30 ವೃತ್ತಗಳನ್ನು ಅಭಿವೃದ್ಧಿಪಡಿಸುವ ಕನಸು ಇತ್ತು. ಅದನ್ನು ಈಡೇರಿಸಲಾಗದ ಕೊರಗು ಇದೆ.
* ಇಂದೋರ್ ಮಾದರಿಯಲ್ಲಿ ಕಸ ವಿಲೇವಾರಿ ಜಾರಿಯಾಗಲೇ ಇಲ್ಲವಲ್ಲ?
ಇಂದೋರ್ ಮಾದರಿಯಲ್ಲಿ ಕಸ ವಿಲೇವಾರಿ ಯೋಜನೆಯನ್ನು ಅಂದುಕೊಂಡಂತೆ ಅನುಷ್ಠಾನಗೊಳಿಸಲು ಆಗಲಿಲ್ಲ ಎಂಬ ನಿರಾಸೆ ಇದೆ. ನ್ಯಾಯಾಲಯದ ಆದೇಶ ಪಾಲನೆಗಾಗಿ, ಹಿಂದೆ ಅಂತಿಮಗೊಂಡಿದ್ದ ಟೆಂಡರ್ ಪ್ರಕಾರ ಗುತ್ತಿಗೆ ಅನುಷ್ಠಾನಗೊಳಿಸಲೇ ಬೇಕಿತ್ತು. ಆ ಗುತ್ತಿಗೆದಾರರೂ ಇಂದೋರ್ ಮಾದರಿಯಲ್ಲೇ ಕಸ ನಿರ್ವಹಣೆಗೆ ಒಪ್ಪಿದ್ದಾರೆ. ಈ ವಿಚಾರದಲ್ಲಿ ನಾನು ಅಲ್ಪತೃಪ್ತ.
* ಪ್ರತಿ ಮನೆಗೆ ತಿಂಗಳಿಗೆ 10 ಸಾವಿರ ಲೀಟರ್ ನೀರನ್ನು ಉಚಿತವಾಗಿ ಒದಗಿಸುವ ಭರವಸೆ ಏನಾಯಿತು?
ಬಜೆಟ್‌ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮವದು. ಆಯುಕ್ತರು ಅದನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವಿದೆ.
* ಕೋವಿಡ್ ನಿರ್ವಹಣೆ ವೇಳೆ ದುಂದುವೆಚ್ಚ ನಡೆದ ಆರೋಪಗಳ ಬಗ್ಗೆ ಏನನ್ನುತ್ತೀರಿ?
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ.ನಗರದಲ್ಲಿ ಕೋವಿಡ್ ಹರಡುವ ವೇಗವನ್ನು ನೋಡಿ 10 ಸಾವಿರ ಹಾಸಿಗೆಗಳ ಆರೈಕೆ ಕೇಂದ್ರ ನಿರ್ಮಿಸಲು ಸರ್ಕಾರವೇ ಮುಂದಾಗಿತ್ತು. ದುಂದುವೆಚ್ಚಕ್ಕೆ ಎಡೆಮಾಡಿಕೊಡುವಂತಹ ಲೋಪಗಳನ್ನು ಹೊಸ ಆಯುಕ್ತರು ಬಂದ ಬಳಿಕ ಸರಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.