ಬೆಂಗಳೂರು: ‘ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ತಲಾ 30 ತಿಂಗಳುಗಳಿಗೆ ಒಬ್ಬರಂತೆ ಇಬ್ಬರು ಮೇಯರ್‌ಗಳನ್ನು ಹೊಂದಲು ಹಾಗೂ ವಾರ್ಡ್ ಸಮಿತಿಗೆ ವಿವಿಧ ಕ್ಷೇತ್ರಗಳ 20 ತಜ್ಞರನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಲು ಶಿಫಾರಸು ಮಾಡಲು ತೀರ್ಮಾನಿಸಿದ್ದೇವೆ’ ಎಂದು ಬಿಬಿಎಂಪಿ ಮಸೂದೆಯ ಪರಾಮರ್ಶೆಗಾಗಿ ರಚಿಸಿರುವ ಜಂಟಿ ಸದನ ಸಲಹಾ ಸಮಿತಿ ಅಧ್ಯಕ್ಷ ಎಸ್.ರಘು ತಿಳಿಸಿದ್ದಾರೆ.
ಸಮಿತಿಯ ಎಲ್ಲ ಸದಸ್ಯರೂ ಚರ್ಚಿಸಿ ಈ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ರಘು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಬಿಬಿಎಂಪಿಗೆ ಏಕಕಾಲದಲ್ಲಿ ಒಬ್ಬರೇ ಮೇಯರ್ ಇರುತ್ತಾರೆ. ಮೇಯರ್ ಅಧಿಕಾರಾವಧಿ 30 ತಿಂಗಳುಗಳು. ಆ ಬಳಿಕ ಮತ್ತೊಬ್ಬರ ಸರದಿ ಬರುತ್ತದೆ’ ಎಂದು ಸ್ಪಷ್ಟಪಡಿಸಿದರು.
ವಾರ್ಡ್ ಸಮಿತಿಗೆ ಆಯಾ ವಾರ್ಡ್‌ಗಳ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ 20 ತಜ್ಞರನ್ನು ನೇಮಕ ಮಾಡುವ ಅಧಿಕಾರ ಮುಖ್ಯ ಆಯುಕ್ತರಿಗೆ ನೀಡಲು ಶಿಫಾರಸು ಮಾಡಲಿದ್ದೇವೆ. ಸ್ಥಳೀಯ ತಜ್ಞರನ್ನೇ ನೇಮಿಸಬೇಕಾಗುತ್ತದೆ. ವಾರ್ಡ್ ಸಮಿತಿಯ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಾ ಇದೆ ಎಂದು
ಹೇಳಿದರು.
ವಲಯ ಆಯುಕ್ತರ ಸಂಖ್ಯೆಯನ್ನು ಎಂಟಕ್ಕಿಂತ ಕಡಿಮೆ ಮಾಡಬೇಕು. ವಲಯ ಆಯುಕ್ತರನ್ನಾಗಿ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೇಮಿಸಬೇಕು. ಆಯಾ ವಲಯಗಳ ಕೆಲಸಗಳ ಬಗ್ಗೆ ಆ ಹಂತದಲ್ಲೇ ತೀರ್ಮಾ ನಿಸಿ ಜಾರಿ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಸ್ಥಾಯಿ ಸಮಿತಿಗಳ ಸಂಖ್ಯೆಯನ್ನು 12 ರಿಂದ 8ಕ್ಕೆ ಇಳಿಸಲು ಮತ್ತು ಪ್ರತಿ ಸಮಿತಿಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಇದರಿಂದ ಪ್ರತಿ ಸ್ಥಾಯಿ ಸಮಿತಿಯ ಸದಸ್ಯರ ಸಂಖ್ಯೆ 12 ರಿಂದ 15ಕ್ಕೆ ಏರಿಕೆ ಆಗಲಿದೆ ಎಂದು ರಘು
ತಿಳಿಸಿದರು.
ಉದಾಹರಣೆಗೆ– ತೆರಿಗೆ ಮತ್ತು ಹಣಕಾಸು ಸಮಿತಿಯ ಜತೆ ಮೇಲ್ಮನವಿ ಸಮಿತಿಯನ್ನು ಸೇರ್ಪಡೆಗೊಳಿಸಲಾಗುವುದು. ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳು ಪ್ರತ್ಯೇಕವಾಗಿದ್ದವು. ಅವುಗಳನ್ನು ಸೇರಿಸಿ ಒಂದೇ ಸಮಿತಿ ರಚಿಸಲಾಗುವುದು. ಮಾರುಕಟ್ಟೆ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿಗಳನ್ನೂ ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದರು.
ಮುಂದಿನ ಸಭೆಯಲ್ಲಿ ನಿರ್ಣಯಗಳು ಅಂತಿಮ
‘ಮಸೂದೆಯಲ್ಲಿದ್ದ 80 ಅಂಶಗಳನ್ನು ಚರ್ಚೆಗಾಗಿ ಗುರುತಿಸಲಾಗಿತ್ತು. ಅವುಗಳಲ್ಲಿ 55 ಅಂಶಗಳ ಚರ್ಚೆ ಮುಗಿದಿದೆ. ಉಳಿದ 25 ಅಂಶಗಳನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ರಘು ತಿಳಿಸಿದರು.
‘ಇದರಿಂದ ಆದಷ್ಟು ಬೇಗ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. ಚುನಾವಣೆ ಮುಂದೂಡಬೇಕು ಎಂಬ ಉದ್ದೇಶದಿಂದ ವರದಿ ಸಲ್ಲಿಸುವುದನ್ನು ತಡ ಮಾಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಈ ಹಿಂದಿನ ಸಲ 2015ರ ಏಪ್ರಿಲ್‌ನಲ್ಲಿ ಬಿಬಿಎಂಪಿ ಅವಧಿ ಮುಗಿಯಿತು. ಆದರೆ ಚುನಾವಣೆ ನಡೆಸಿದ್ದು ಆಗಸ್ಟ್ ತಿಂಗಳಲ್ಲಿ. ನಾಲ್ಕು ತಿಂಗಳು ತಡವಾಗಿ ಚುನಾವಣೆ ನಡೆಸಲಾಗಿತ್ತು. ಈಗ ನಮಗಾಗಲಿ ಸರ್ಕಾರಕ್ಕಾಗಲಿ ಚುನಾವಣೆ ಮುಂದೂಡಬೇಕು ಎಂಬ ಉದ್ದೇಶವಿಲ್ಲ’ ಎಂದು ರಘು ಹೇಳಿದರು.
ವಾರ್ಡ್ ಸಮಿತಿ ಸದಸ್ಯರನ್ನು ನೇಮಿಸುವ ಅಧಿಕಾರ ಮುಖ್ಯ ಆಯುಕ್ತರಿಗೆ
ವಲಯ ಆಯುಕ್ತರನ್ನಾಗಿ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿ
ಸ್ಥಾಯಿಸಮಿತಿ ಸದಸ್ಯರ ಸಂಖ್ಯೆ 12ರಿಂದ 15ಕ್ಕೆ ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.