ADVERTISEMENT

ಅಬ್ದುಲ್ ರಜಾಕ್ ಅವರಿಂದ ಮಾಂಸ ಖರೀದಿ: ಮಾಂಸದಂಗಡಿ, ಹೋಟೆಲ್‌ ಮಾಲೀಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 16:19 IST
Last Updated 28 ಜುಲೈ 2024, 16:19 IST
   

ಬೆಂಗಳೂರು: ಹೋಟೆಲ್ ಉದ್ಯಮಿ ಅಬ್ದುಲ್ ರಜಾಕ್‌ ಅವರಿಂದ ಮಾಂಸ ಖರೀದಿಸುತ್ತಿದ್ದ ಮಾಂಸದಂಗಡಿಗಳು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮಾಲೀಕರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

‘ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಮಾಂಸದಂಗಡಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿದೆ. ಎಷ್ಟು ವರ್ಷಗಳಿಂದ ಮಾಂಸ ಖರೀದಿಸಲಾಗುತ್ತಿತ್ತು? ಯಾರಿಂದ ಹಾಗೂ ಖರೀದಿ ಮಾಡಿದ್ದ ಮಾಂಸದ ಬೆಲೆ ಎಷ್ಟಿತ್ತು? ಎಂಬುದರ ಮಾಹಿತಿ ಕೇಳಲಾಗಿದೆ. ರಾಜಸ್ಥಾನದಿಂದ ಮಾಂಸ ತರಿಸುತ್ತಿದ್ದ ಉದ್ಯಮಿ ಅಬ್ದುಲ್ ರಜಾಕ್ ಅವರಿಗೂ ಪರವಾನಗಿಯ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಶನಿವಾರ ಇಬ್ಬರು ವಿಚಾರಣೆಗೆ ಹಾಜರಾಗಿದ್ದರು. ಉಳಿದವರು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ ’ ಎಂದು ಹೇಳಿದರು.

ADVERTISEMENT

ರೈಲ್ವೆ ಅಧಿಕಾರಿಗಳಿಗೆ ಪತ್ರ:

ನಾಯಿ ಹಾಗೂ ಇತರೆ ಮಾಂಸಗಳನ್ನು ರೈಲಿನ ಮೂಲಕ ನಗರಕ್ಕೆ ತಂದು ಹೋಟೆಲ್‌ಗಳಿಗೆ ಪೂರೈಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಪೊಲೀಸರು ಮಾಹಿತಿ ಕೇಳಿ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ಈಗಾಗಲೇ ಪ್ರಕರಣದ ಸಂಬಂಧ ರಾಜಸ್ಥಾನದ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಾಂಸವನ್ನು ನಗರಕ್ಕೆ ರವಾನೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡುವ ಸಲುವಾಗಿ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಕೇಳಲಾಗಿದೆ. ಬಳಿಕ ಆತನಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಎಲ್ಲಿಂದ ರೈಲಿನಲ್ಲಿ ಮಾಂಸ ತರಲಾಗುತ್ತಿತ್ತು? ಎಷ್ಟು ದಿನಗಳಿಗೊಮ್ಮೆ ಬರುತ್ತಿತ್ತು? ಯಾವ ರೈಲಿನಲ್ಲಿ ಯಾರು ತಗೆದುಕೊಂಡು ಬರುತ್ತಿದ್ದರು? ಯಾವ ಪ್ಲಾಟ್‌ಫಾರ್ಮ್‌ಗೆ ರೈಲು ಬರುತ್ತಿತ್ತು? ಮಾಂಸವನ್ನು ಯಾರು ಬಂದು ತೆಗೆದುಕೊಳ್ಳುತ್ತಿದ್ದರು? ಎಂಬ ಬಗ್ಗೆ ವಿವರ ಕೇಳಲಾಗಿದೆ. ಮಾಂಸ ಹೊತ್ತ ರೈಲು ನಿಲುಗಡೆ ಆಗುತ್ತಿದ್ದ ಪ್ಲಾಟ್‌ಫಾರ್ಮ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಒದಗಿಸುವಂತೆ ಕೋರಲಾಗಿದೆ’ ಎಂದು ಹೇಳಿದ್ದಾರೆ. 

‘ಜೈಪುರ–ಮೈಸೂರು ಎಕ್ಸ್‌ಪ್ರೆಸ್ ರೈಲು ಮೂಲಕ ಅಂದಾಜು 4,500 ಕೆ.ಜಿ ಮಾಂಸವನ್ನು ಶುಕ್ರವಾರ ನಗರಕ್ಕೆ ತರಲಾಗಿತ್ತು. ಉದ್ಯಮಿ ಅಬ್ದುಲ್ ರಜಾಕ್ ತಾವೇ ಮಾಂಸ ತರಿಸುತ್ತಿದ್ದುದಾಗಿ ಹೇಳಿಕೊಂಡಿದ್ದರು. ಅದರಲ್ಲಿ ಕುರಿ, ಮೇಕೆ ಮಾಂಸದ ಜತೆಗೆ ನಾಯಿ ಮಾಂಸವನ್ನೂ ತರಲಾಗಿದೆ ಎಂದು ಆರೋಪಿಸಲಾಗಿದೆ. ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ನಾಲ್ಕು ಬಾಕ್ಸ್‌ಗಳಲ್ಲಿದ್ದ ಮಾಂಸದ ಮಾದರಿಯನ್ನು ಸಂಗ್ರಹಿಸಿ ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೈದರಾಬಾದ್ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ಆದರೆ, ಪಶುವೈದ್ಯಾಧಿಕಾರಿಗಳು ಬಾಕ್ಸ್‌ಗಳಲ್ಲಿ ಇದ್ದಿದ್ದು ನಾಯಿ ಮಾಂಸ ಅಲ್ಲವೆಂದು ವರದಿ ನೀಡಿದ್ದಾರೆ. ಬಾಕ್ಸ್‌ಗಳಲ್ಲಿದ್ದ ಮಾಂಸವು ಸೇವನೆಗೆ ಯೋಗ್ಯವಾಗಿರಲಿಲ್ಲ. ಸ್ವಚ್ಛತೆ ಕೂಡ ಕಾಯ್ದುಕೊಂಡಿರಲಿಲ್ಲವೆಂಬ ಆರೋಪದ ಹಿನ್ನೆಲೆಯಲ್ಲಿ ಪೂರೈಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.