ADVERTISEMENT

ಬೆಂಗಳೂರು | ಮೆಡಿಕಲ್‌ ಸೀಟು ಕೊಡಿಸುವ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 14:44 IST
Last Updated 31 ಅಕ್ಟೋಬರ್ 2023, 14:44 IST
ವಂಚನೆ
ವಂಚನೆ   

ಬೆಂಗಳೂರು: ಹೊರ ರಾಜ್ಯದಲ್ಲಿ ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಹೈದರಾಬಾದ್‌ನ ಆರೋಪಿ ಶರತ್‌ಗೌಡ (45) ಎಂಬಾತನನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ₹ 47.80 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ. ಸಂಜಯನಗರದ ನ್ಯೂ ಬಿ.ಇ.ಎಲ್ ರಸ್ತೆಯಲ್ಲಿ ‘ನೆಕ್ಸಸ್ ಎಡು’ ಸಂಸ್ಥೆ ತೆರೆದಿದ್ದ ಎಂದು ಪೊಲೀಸರು ಹೇಳಿದರು.

ಹೈದರಾಬಾದ್‌ನಿಂದ ಶರತ್, ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಏಜೆನ್ಸಿಯೊಂದು ಸಿದ್ಧಪಡಿಸಿದ್ದ ಆ್ಯಪ್‌ನಲ್ಲಿ ರಾಜ್ಯ ಹಾಗೂ ನೆರೆರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳ ಪಟ್ಟಿ ದಾಖಲಾಗಿತ್ತು. ಮಧ್ಯವರ್ತಿಗಳ ಮೂಲಕ ಪಟ್ಟಿಯನ್ನು ಪಡೆದಿದ್ದ ಆರೋಪಿ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರ ಮೂಲಕ ಕರೆ ಮಾಡಿಸಿ ಕಡಿಮೆ ಮೊತ್ತಕ್ಕೆ ತಮಿಳುನಾಡು, ಕೇರಳ, ತೆಲಂಗಾಣದಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

₹20 ರಿಂದ ₹ 25 ಲಕ್ಷಕ್ಕೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ಮುಂಗಡವಾಗಿ ₹ 12ರಿಂದ ₹ 15 ಲಕ್ಷ ಪಡೆಯುತ್ತಿದ್ದ. ತಿಮ್ಮೇಗೌಡ ಅವರ ಪುತ್ರನಿಗೆ ಕೇರಳದ ಪಿ.ಕೆ.ದಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್‌ ಸೈನ್ಸ್‌‌ನಲ್ಲಿ ಸೀಟು ಕೊಡಿಸುವುದಾಗಿ ₹10 ಲಕ್ಷ ಪಡೆದುಕೊಂಡಿದ್ದ. ಸೀಟು ದೊರೆಯದಿದ್ದಾಗ ತಿಮ್ಮೇಗೌಡ ಅವರು ದೂರು ನೀಡಿದ್ದರು. ಹೈದರಾಬಾದ್‌ನಲ್ಲಿದ್ದ ಆತನ  ಅಪಾರ್ಟ್‌ಮೆಂಟ್‌ನಲ್ಲೇ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರಲಾಯಿತು ಎಂದು ಪೊಲೀಸರು ಹೇಳಿದರು.

ಆರೋಪಿ 18 ಮಂದಿಗೆ ವಂಚನೆ ಮಾಡಿದ್ದು, ಆತನಿಂದ ₹ 47.80 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.