ADVERTISEMENT

ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿ ₹6.38 ಕೋಟಿ ವಂಚನೆ

ಎಂಟು ವಿದ್ಯಾರ್ಥಿಗಳ ಪೋಷಕರಿಂದ ಹಣ ಪಡೆದು ಮೋಸ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:13 IST
Last Updated 28 ಅಕ್ಟೋಬರ್ 2024, 16:13 IST
<div class="paragraphs"><p>ವೈದ್ಯಕೀಯ ಸೀಟು</p></div>

ವೈದ್ಯಕೀಯ ಸೀಟು

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ ₹6.38 ಕೋಟಿ ಪಡೆದು ವಂಚನೆ ನಡೆಸಿರುವ ಆರೋಪದ ಅಡಿ ಚೆನ್ನೈನ ಮಹಿಳೆ ಅನ್ನಾ ಜಾಕಬ್‌ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ಇಲ್ಲಿನ ವಿಬ್‌ಗಯಾರ್‌ ಶಾಲೆಯಲ್ಲಿ ಶಿಕ್ಷಕಿ ಆಗಿರುವ ದೀಪ್ತಿ ಕೆ. ಸಿಂಹ ಅವರು ದೂರು ನೀಡಿದ್ದರು.

‘ದೀಪ್ತಿ ಅವರು ಶಿಕ್ಷಕಿ ಕೆಲಸದ ಜತೆಗೆ ಮನೆಪಾಠ ಸಹ ಮಾಡುತ್ತಿದ್ದರು. ವಸುಂಧರಾ ಎಂಬವರ ಮೂಲಕ ಅನ್ನಾ ಜಾಕಬ್‌ ಅವರ ಪರಿಚಯವಾಗಿತ್ತು. ಬೆಂಗಳೂರಿನ ಕೋರಮಂಗಲದ ಸೇಂಟ್‌ ಜಾನ್ ಮೆಡಿಕಲ್ ಕಾಲೇಜು ಹಾಗೂ ವೆಲ್ಲೂರಿನ ಸಿಎಂಸಿ ಮೆಡಿಕಲ್‌ ಕಾಲೇಜುಗಳಲ್ಲಿ ಟ್ರಸ್ಟಿ ಆಗಿರುವುದಾಗಿ ಆರೋಪಿ ಪರಿಚಯ ಮಾಡಿಕೊಂಡಿದ್ದರು. ಎರಡೂ ಕಾಲೇಜುಗಳಲ್ಲಿ ಎಂಬಿಬಿಎಸ್‌ ಹಾಗೂ ಎಂ.ಡಿಗೆ ಪೇಮೆಂಟ್‌ ಸೀಟುಗಳಿದ್ದು ಅವುಗಳನ್ನು ಕೊಡಿಸುವುದಾಗಿ ಹೇಳಿದ್ದರು. ಪರಿಚಯಸ್ಥ ವಿದ್ಯಾರ್ಥಿಗಳಿದ್ದರೆ ಕಳುಹಿಸುವಂತೆಯೂ ಕೋರಿದ್ದರು. ದೀಪ್ತಿ ಅವರು ಈ ವಿಚಾರವನ್ನು ವಿದ್ಯಾರ್ಥಿಗಳ ಕೆಲವು ಪೋಷಕರಿಗೆ ತಿಳಿಸಿದ್ದರು. ನಂತರ ಆರೋಪಿ ಹಾಗೂ ಎಂಟು ವಿದ್ಯಾರ್ಥಿಗಳ ಪೋಷಕರು, ಹೋಟೆಲ್‌ವೊಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಹಣ ಕೊಟ್ಟರೆ ಸೀಟು ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಮಾತುಕತೆಯ ಬಳಿಕ ಐದು ವಿದ್ಯಾರ್ಥಿಗಳು ದೀಪ್ತಿ ಅವರ ಬ್ಯಾಂಕ್‌ ಖಾತೆಗೆ ಹಣ ಹಾಕಿದ್ದರು. ಆ ಹಣವನ್ನು ದೀಪ್ತಿ ಅವರು ಚೆನ್ನೈನ ಬ್ಯಾಂಕ್‌ವೊಂದರಲ್ಲಿ ಆರೋಪಿ ಹೆಸರಿನಲ್ಲಿದ್ದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮೆಡಿಕಲ್ ಕಾಲೇಜಿಗೆ ಸೇರ್ಪಡೆ ಕಾಲಾವಧಿ ಮುಕ್ತಾಯವಾದರೂ ಮಕ್ಕಳಿಗೆ ಸೀಟು ಕೊಡಿಸಿರಲಿಲ್ಲ. ಆರೋ‍ಪಿ ಯಾವುದೇ ಕಾಲೇಜಿನಲ್ಲಿ ಟ್ರಸ್ಟಿ ಅಲ್ಲ ಎಂಬುದು ಹಣ ನೀಡಿದ್ದವರಿಗೆ ಗೊತ್ತಾಗಿತ್ತು. ನಂತರ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ಹೈದರಾಬಾದ್‌ನಲ್ಲೂ ವಂಚನೆ: ‘ಹೈದರಾಬಾದ್‌ನ ಮುನಾವರ್‌ ಅವರ ಪುತ್ರನಿಗೂ ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ಅನ್ನಾ ಜಾಕಬ್‌ ವಂಚನೆ ನಡೆಸಿದ್ದಾರೆ’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.