ಬೆಂಗಳೂರು: ‘ನಟಿ ಶ್ರುತಿ ಹರಿಹರನ್ ಸಾರಾಸಗಟಾಗಿ ಸುಳ್ಳು ಹೇಳಲಾರರು. ನಟ ಅರ್ಜುನ್ ಸರ್ಜಾ ಅವರನ್ನು ಕೂಡ ಹತ್ತಿರದಿಂದ ಬಲ್ಲೆ. ಅವರ ನಡುವೆ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಯಾರದ್ದೇ ತಪ್ಪಿದ್ದರೂ ಅವರಿಗೆ ಶಿಕ್ಷೆಯಾಗಬೇಕು’ ಎಂದು ಚಂದನವನದ ಹಿರಿಯ ನಟಿ ಶ್ರುತಿ ಅಭಿಪ್ರಾಯಪಟ್ಟರು.
ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಮಂಗಳವಾರ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ‘ಮಿಷನ್ ಸಾಹಸಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಅವರಿಬ್ಬರ ಮಧ್ಯೆ ಏನೂ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು. ಮೀ–ಟೂ ಅತ್ಯುತ್ತಮ ಆಂದೋಲನ. ಇದನ್ನು ನಾವು ಉಳಿಸಿಕೊಳ್ಳಬೇಕು. ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡಬೇಕು. ಆದರೆ ಯಾರೂ ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದರು.
‘ಮೀ–ಟೂ ಆಂದೋಲನದಿಂದ ಚಂದನವನಕ್ಕೆ ಕಳಂಕ ತಟ್ಟಿದೆ ಅನ್ನುವುದು ತಪ್ಪು. ಚಿತ್ರರಂಗದಲ್ಲಿ ಮಾತ್ರ ಅಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮೀ–ಟೂ ಪ್ರಕರಣಗಳು ದಾಖಲಾಗಿವೆ. ಆದರೆ ಸಿನಿಮಾ ಕ್ಷೇತ್ರದವರನ್ನು ಹೆಚ್ಚು ಬಿಂಬಿಸಲಾಗುತ್ತಿದೆ. ಈ ಆಂದೋಲನ ಸೆಲೆಬ್ರಿಟಿಗಳ ಆಚೆಗೂ ವಿಸ್ತರಿಸಬೇಕು’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.