ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ಮರುಜೀವ ಪಡೆದುಕೊಂಡಿದ್ದು, ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸಾಕ್ಷಿದಾರರಿಗೆ ಇತ್ತೀಚೆಗೆ ನೋಟಿಸ್ ನೀಡಿದ್ದಾರೆ.
ಶ್ರುತಿ ಅವರು ನೀಡಿದ್ದ ದೂರು ಆಧರಿಸಿ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ (354,509) ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ 2018ರಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಹಾಗೂ ಇತರರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದರು.
‘ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆಯಲ್ಲೂ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಮಾಹಿತಿ ಇದೆ. ಇದನ್ನು ಖಚಿತಪಡಿಸಿಕೊಳ್ಳಲು ಸಿನಿಮಾ ನಿರ್ದೇಶಕ ಅರುಣ್ ವೈದ್ಯನಾಥನ್, ಛಾಯಾಗ್ರಾಹಕ ಅರವಿಂದ್ ಕೃಷ್ಣ ಹಾಗೂ ನಿರ್ಮಾಪಕ ಜಯರಾಮ್ ಅವರಿಂದ ಸಾಕ್ಷಿಯಾಗಿ ಹೇಳಿಕೆ ಪಡೆಯಬೇಕಿದೆ. ಹಲವು ಬಾರಿ ನೋಟಿಸ್ ನೀಡಿದರೂ ಅವರು ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಇತ್ತೀಚೆಗೆ ಪುನಃ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆಲಸ ನಿಮಿತ್ತ ವಿದೇಶದಲ್ಲಿರುವುದಾಗಿ ಹೇಳಿರುವ ಅರುಣ್, ವಿಚಾರಣೆಗೆ ಬರಲು ಕಾಲಾವಕಾಶ ಕೋರಿದ್ದಾರೆ. ಇತರರು ಸದ್ಯದಲ್ಲೇ ಠಾಣೆಗೆ ಬರುವುದಾಗಿ ಹೇಳಿದ್ದಾರೆ’ ಎಂದೂ ತಿಳಿಸಿವೆ.
‘ಪ್ರಕರಣ ದಾಖಲಾಗುತ್ತಿದ್ದಂತೆ ದೂರುದಾರ, ಆರೋಪಿ ಹಾಗೂ ಸಾಕ್ಷಿದಾರರ ಹೇಳಿಕೆ ಪಡೆಯುವುದು ಕಾನೂನು ಪ್ರಕ್ರಿಯೆ. ಸಾಕ್ಷಿದಾರರಿಗೆ ನೋಟಿಸ್ ನೀಡಿರುವುದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿಲ್ಲ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಸಾಕ್ಷಿದಾರರು ಹೇಳಿಕೆ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.