ಬೆಂಗಳೂರು: ನಗರದ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ದೂರದ ಊರುಗಳಿಂದ ಬರುವ ಪ್ರಯಾಣಿಕರು ಭಯದಲ್ಲಿ ಓಡಾಡುವಂತಾಗಿದೆ. ಪೊಲೀಸರ ನಿರ್ಲಕ್ಷ್ಯ ಹಾಗೂ ಅಪರಾಧ ಪತ್ತೆ ತಡವಾಗುತ್ತಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಸ್ಸಿನಲ್ಲಿ ರಾಜಧಾನಿಯತ್ತ ಬರುವ ಬಹುತೇಕ ಜನ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿಯತ್ತಾರೆ. ಜೊತೆಗೆ, ದೇಶದ ಎಲ್ಲ ಭಾಗಕ್ಕೂ ಮೆಜೆಸ್ಟಿಕ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಉತ್ತಮವಾಗಿದೆ. ಹೀಗಾಗಿ, ನಿತ್ಯವೂ ಲಕ್ಷಾಂತರ ಸಂಖ್ಯೆಯ ಜನರು ನಿಲ್ದಾಣಕ್ಕೆ ಬಂದು ಹೋಗುತ್ತಾರೆ.
ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ನಿಲ್ದಾಣದಲ್ಲಿರುವ ಜನ ಸಂದಣಿ ನಡುವೆಯೇ ಕಳ್ಳತನ ಹಾಗೂ ಸುಲಿಗೆ ಕೃತ್ಯ ಎಸಗುತ್ತಿದ್ದಾರೆ. ಚಿನ್ನ ಹಾಗೂ ಹಣ ಕಳೆದುಕೊಂಡ ಜನ, ಉಪ್ಪಾರಪೇಟೆ ಠಾಣೆಗೆ ದೂರು ನೀಡುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿಕೊಳ್ಳುತ್ತಿರುವ ಪೊಲೀಸರು, ತನಿಖೆ ಪ್ರಗತಿಯಲ್ಲಿರುವುದಾಗಿ ಹೇಳಿ ದಿನ ಕಳೆಯುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ.
ಗಸ್ತು ತಿರುಗಲು ಪೊಲೀಸರ ನಿರ್ಲಕ್ಷ್ಯ: ‘ಮೆಜೆಸ್ಟಿಕ್‌ನಲ್ಲಿ ರೈಲು ಹಾಗೂ ಬಸ್ ನಿಲ್ದಾಣಗಳಿವೆ. ಇಂಥ ಸ್ಥಳಗಳಲ್ಲಿ ಅಪರಾಧ ಕೃತ್ಯ ಎಸಗುವ ದೊಡ್ಡ ತಂಡವಿದೆ. ಇದು ಗೊತ್ತಿದ್ದರೂ ಪೊಲೀಸರು ಮೌನವಾಗಿದ್ದಾರೆ. ನಿರಂತರವಾಗಿ ಗಸ್ತು ತಿರುಗಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಸ್ಥಳೀಯ ವ್ಯಾಪಾರಿ ಗಣೇಶ್ ಆರೋಪಿಸಿದರು.
‘ನಿತ್ಯವೂ ಬೆಳಿಗ್ಗೆ ಹಾಗೂ ರಾತ್ರಿ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲೇ ಕೆಲವರು, ಚಿನ್ನಾಭರಣ ಇಟ್ಟುಕೊಂಡಿರುವ ಪ್ರಯಾಣಿಕರನ್ನು ಹಿಂಬಾಲಿಸಿ ಕಳವು ಮಾಡುತ್ತಿದ್ದಾರೆ. ಮತ್ತಷ್ಟು ಮಂದಿ, ಬಸ್ ಏರಿ ಯಾರ ಗಮನಕ್ಕೂ ಬಾರದಂತೆ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಾರೆ. ಚಿನ್ನ ಹಾಗೂ ಹಣ ಕಳೆದುಕೊಂಡ ಪ್ರಯಾಣಿಕರ ಗೋಳು ಹೇಳತೀರದು’ ಎಂದರು.
ಒಂದೇ ತಿಂಗಳಿನಲ್ಲಿ ಹಲವು ಪ್ರಕರಣ: ‘ನಿಲ್ದಾಣಕ್ಕೆ ಭೇಟಿ ನೀಡಿದ್ದ ಪ್ರಯಾಣಿಕರ ಚಿನ್ನ ಹಾಗೂ ಇತರೆ ವಸ್ತುಗಳು ಕಳುವಾದ ಬಗ್ಗೆ ಒಂದೇ ತಿಂಗಳಿನಲ್ಲಿ ಹಲವು ಪ್ರಕರಣಗಳು ನಡೆದಿವೆ. ಕೆಲವರು ದೂರು ನೀಡಿದ್ದಾರೆ. ಮತ್ತಷ್ಟು ಮಂದಿ, ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ನಿಲ್ದಾಣದ ವ್ಯಾಪಾರಿಯೊಬ್ಬರು ಹೇಳಿದರು.
‘ಪವನ್ ಎಂಬುವವರು ಹೈದರಾಬಾದ್‌ಗೆ ಹೋಗಲು ಏಪ್ರಿಲ್ 12ರಂದು ನಿಲ್ದಾಣಕ್ಕೆ ಬಂದಿದ್ದರು. ಚಿನ್ನಾಭರಣವನ್ನು ಚಿಕ್ಕ ಪೊಟ್ಟಣದಲ್ಲಿ ಹಾಕಿ, ಜೇಬಿನಲ್ಲಿಟ್ಟುಕೊಂಡಿದ್ದರು. ಮೊಬೈಲ್ ಸಹ ಜೊತೆಗಿತ್ತು. ಅವರ ಗಮನ ಬೇರೆಡೆ ಸೆಳೆದಿದ್ದ ಆರೋಪಿಗಳು, ಜೇಬಿನಲ್ಲಿದ್ದ ₹1.45 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಕದ್ದೊಯ್ದಿದ್ದಾರೆ’ ಎಂದರು.
‘ಶಿಕ್ಷಕ ಶಿವಾನಂದ ಎಂಬುವರು ಏಪ್ರಿಲ್ 13ರಂದು ಹುಮನಾಬಾದ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದಿದ್ದರು. ಮೆಜೆಸ್ಟಿಕ್ ಬಳಿ ಬಸ್ಸಿನಿಂದ ಇಳಿದಿದ್ದರು. ಅವರ ಕೊರಳಲ್ಲಿದ್ದ ₹ 1 ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರ ಇರಲಿಲ್ಲ. ಚಿನ್ನದ ಸರ ಕಿತ್ತೊಯ್ದ ಬಗ್ಗೆ ಅವರು ಠಾಣೆಗೆ ದೂರು ನೀಡಿದ್ದಾರೆ’ ಎಂದು ಅವರು ಹೇಳಿದರು.
ಹೆಸರಿಗಷ್ಟೇ ಪೊಲೀಸ್ ಹೊರ ಠಾಣೆ: ‘ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿಲ್ದಾಣದಲ್ಲಿ ಸುತ್ತಾಡಲು ಜನ ಭಯಪಡುತ್ತಿದ್ದಾರೆ. ನಿಲ್ದಾಣದಲ್ಲಿ ಹೆಸರಿಗಷ್ಟೇ ಪೊಲೀಸ್ ಹೊರ ಠಾಣೆ ತೆರೆಯಲಾಗಿದೆ’ ಎಂದು ಪ್ರಯಾಣಿಕರು ಹೇಳಿದರು.
‘ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ, ಹೊರ ಠಾಣೆಯಲ್ಲಿ ಇರುವುದಿಲ್ಲ. ನಿಲ್ದಾಣದಲ್ಲಿರುವ ಅಂಗಡಿಯಿಂದ ಅಂಗಡಿ ಸುತ್ತಾಡಿ ‘ಕೈ ಬೀಸಿ’ ಮಾಡಿಕೊಂಡು ಕರ್ತವ್ಯ ಮುಗಿಸುತ್ತಿದ್ದಾರೆ. ಅತ್ತ ನಿಲ್ದಾಣದಲ್ಲಿ ಅಪರಾಧ ಕೃತ್ಯಗಳು ನಡೆದರೂ ಅದರ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಲೇ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಪೊಲೀಸ್ ಹಿರಿಯ ಅಧಿಕಾರಿಗಳು, ನಿಲ್ದಾಣದಲ್ಲಿ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಕಳ್ಳತನ, ಸುಲಿಗೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
‘ಕೆಎಸ್‌ಆರ್‌ಟಿಸಿ ಬಿಎಂಟಿಸಿಗೆ ಪತ್ರ’
‘ನಿಲ್ದಾಣದಲ್ಲಿ ಅಪರಾಧ ತಡೆಗೆ ಆದ್ಯತೆ ನೀಡಲಾಗಿದೆ. ನಿಲ್ದಾಣದ ಎಲ್ಲ ಕಡೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ– ಬಿಎಂಟಿಸಿ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ಬಸ್ ನಿಲ್ದಾಣದ ಜಾಗ ಕೆಎಸ್‌ಆರ್‌ಟಿಸಿ–ಬಿಎಂಟಿಸಿಗೆ ಸೇರಿದ್ದು. ನಿಗಮದ ಭದ್ರತಾ ಸಿಬ್ಬಂದಿಯೂ ಇದ್ದಾರೆ. ಅವರ ಜೊತೆ ಪೊಲೀಸರು ನಿತ್ಯವೂ ಗಸ್ತು ತಿರುಗುತ್ತಿದ್ದಾರೆ. 112 ನಿಯಂತ್ರಣ ಕೊಠಡಿಗೆ ಕರೆ ಬಂದ ಕೂಡಲೇ ಸ್ಪಂದಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಹೆಚ್ಚಿನ ಪ್ರಯಾಣ ದರ ವಸೂಲಿ’
‘ನಿಲ್ದಾಣದಲ್ಲಿರುವ ಆಟೊ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಪ್ರಯಾಣಿಕರ ಜೊತೆ ಜಗಳ ತೆಗೆಯುತ್ತಿದ್ದಾರೆ. ಈ ಬಗ್ಗೆಯೂ ಹೆಚ್ಚಿನ ದೂರುಗಳಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಪ್ರಯಾಣಿಕ ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.