ADVERTISEMENT

‘ಸುಪ್ರೀಂ’ ನಿರ್ದೇಶನದ ನಂತರವೇ ಮೇಕೆದಾಟು ಜಾರಿ : ಬೊಮ್ಮಾಯಿ

‘ಹಿಂದಿನ ಸರ್ಕಾರದ ತಪ್ಪಿನಿಂದ ವಿವಾದಕ್ಕೆ ಸಿಲುಕಿದ ಯೋಜನೆ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 19:52 IST
Last Updated 2 ಫೆಬ್ರುವರಿ 2023, 19:52 IST
   

ಬೆಂಗಳೂರು: ‘ಹಿಂದಿನ ಸರ್ಕಾರದ ತಪ್ಪಿನಿಂದ ಮೇಕೆದಾಟು ಯೋಜನೆ ಪ್ರಾರಂಭದಲ್ಲೇ ಅಂತರರಾಜ್ಯ ವಿವಾದದಲ್ಲಿ ಸಿಲುಕಿದೆ. ಸುಪ್ರೀಂಕೋರ್ಟ್‌ ಮುಂದೆ ಮಾರ್ಚ್‌ನಲ್ಲಿ ವಿಚಾರಣೆಗೆ ಬರಲಿದ್ದು, ಕೋರ್ಟ್ ನಿರ್ದೇಶನದಂತೆ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಯೋಜನೆಗೆ ಬಜೆಟ್‌ನಲ್ಲಿ ₹ 1 ಸಾವಿರ ಕೋಟಿ ಮೀಸಲಿಡಲಾಗಿದೆ. ಸಮಗ್ರ ಯೋಜನಾ ವರದಿಗೆ ಅನುಮತಿ ದೊರೆಯದೆ ಸರ್ಕಾರ ಅಸಹಾಯಕವಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್‌ನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ವಸತಿ, ಕೃಷಿ, ನೀರಾವರಿಗೆ ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತ್ರಿಗೆ ಅನುದಾನ ಕಡಿಮೆಯಾಗಿದೆ ಎನ್ನುವುದು ಸರಿಯಲ್ಲ. ರಾಜ್ಯವು ಹಲವು ಯೋಜನೆಗಳನ್ನು ಉದ್ಯೋಗ ಖಾತ್ರಿಯಲ್ಲಿ ವಿಲೀನಗೊಳಿಸಿದೆ. ಸ್ಥಳೀಯ ಸಂಪನ್ಮೂಲಗಳನ್ನೂ ಬಳಸಲಾಗುತ್ತಿದೆ ಎಂದರು.

ADVERTISEMENT

ಭದ್ರಾ ಮೇಲ್ದಂಡೆ ಯೋಜನೆಗೆ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚಾಲನೆ ನೀಡಿತ್ತು. ಆರಂಭದಲ್ಲಿ 16 ಟಿಎಂಸಿ ಅಡಿ ಇದ್ದದ್ದು, ಈಗ 23 ಟಿಎಂಸಿ ಅಡಿಗೆ ಅವಕಾಶ ನೀಡಲಾಗಿದೆ. ವಿಪಕ್ಷಗಳ ಟೀಕೆ ಅನಗತ್ಯ ಎಂದರು. ನೀರಾವರಿ ಯೋಜನೆಗಳಿಗೆ ಯುಪಿಎ ನಿರ್ಬಂಧ ಹಾಕಿತ್ತು. ಎನ್‌ಡಿಎ ಬಂದ ನಂತರ ಈ ಪರಿಸ್ಥಿತಿ ಬದಲಾಗಿದೆ. ಈಗ ₹ 5,300 ಕೋಟಿ ಅನುದಾನ ಘೋಷಿಸಲಾಗಿದೆ. ರಾಜ್ಯ ಸರ್ಕಾರ ಆಗಲೇ ₹ 13 ಸಾವಿರ ಕೋಟಿ ವ್ಯಯಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.