ADVERTISEMENT

ಕಾಡಿದ ದೋಸೆಯ ‘ಅಮೃತ’ ನೆನಪುಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 17:29 IST
Last Updated 26 ಅಕ್ಟೋಬರ್ 2018, 17:29 IST
ವಿದ್ಯಾರ್ಥಿ ಭವನದ ಮಾಲೀಕರಾದ ಅರುಣ್‌ ಅಡಿಗ, ರಾಮಕೃಷ್ಣ ಅಡಿಗ, ಉದ್ಯಮಿ ಪಿ.ಸದಾನಂದ ಮಯ್ಯ, ಸುಧಾ ಮೂರ್ತಿ, ಸಿ.ಎನ್‌.ಆರ್‌.ರಾವ್‌, ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಕೆ.ಎಸ್‌.ನಿಸಾರ್‌ ಅಹಮದ್‌ ಮತ್ತು ರಾಜ್ಯ ಅಂಚೆ ಮಹಾಪ್ರಬಂಧಕ ಚಾರ್ಲ್ಸ್‌ ಲೋಬೊ ಅವರು ಭವನದ ಹಳೆಯ ಸಿಬ್ಬಂದಿಯನ್ನು ಸನ್ಮಾನಿಸಿದರು – ಪ್ರಜಾವಾಣಿ ಚಿತ್ರ
ವಿದ್ಯಾರ್ಥಿ ಭವನದ ಮಾಲೀಕರಾದ ಅರುಣ್‌ ಅಡಿಗ, ರಾಮಕೃಷ್ಣ ಅಡಿಗ, ಉದ್ಯಮಿ ಪಿ.ಸದಾನಂದ ಮಯ್ಯ, ಸುಧಾ ಮೂರ್ತಿ, ಸಿ.ಎನ್‌.ಆರ್‌.ರಾವ್‌, ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಕೆ.ಎಸ್‌.ನಿಸಾರ್‌ ಅಹಮದ್‌ ಮತ್ತು ರಾಜ್ಯ ಅಂಚೆ ಮಹಾಪ್ರಬಂಧಕ ಚಾರ್ಲ್ಸ್‌ ಲೋಬೊ ಅವರು ಭವನದ ಹಳೆಯ ಸಿಬ್ಬಂದಿಯನ್ನು ಸನ್ಮಾನಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಗ್ರಾಹಕರ ದೋಸೆ ಪ್ರೀತಿ, ಹೋಟೆಲ್‌ ಮಾಲೀಕರು ಮತ್ತು ಸಿಬ್ಬಂದಿಯ ಸಹೃದಯತೆ, ಮಹನೀಯರ ನೆನಪುಗಳ ಮೆಲುಕಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿದ್ಯಾರ್ಥಿ ಭವನದ ಅಮೃತ ಮಹೋತ್ಸವ’ ಸಮಾರಂಭ ಸಾಕ್ಷಿಯಾಯಿತು.

ವಿಜ್ಞಾನಿ ಸಿ.ಎನ್‌.ಆರ್‌.ರಾವ್‌, ‘ನಾನು 1951ರಲ್ಲಿ ಬಿ.ಎಸ್ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದಾಗ ತಂದೆಯವರೊಂದಿಗೆ ಭವನಕ್ಕೆ ಮೊದಲ ಬಾರಿಗೆ ಹೋಗಿ ದೋಸೆ ಸವಿದಿದ್ದೆ. ನಂತರ 1960ರಲ್ಲಿ ಮದುವೆಯ ಹಿಂದಿನ ದಿನ ಭಾವಿ ಪತ್ನಿಯನ್ನು ಭವನಕ್ಕೆ ಕರೆದುಕೊಂಡು ಹೋಗಿದ್ದೆ’ ಎಂದು ಸ್ಮರಿಸಿದರು.

‘ಹೋಟೆಲ್‌ವೊಂದು ಇಷ್ಟು ವರ್ಷಗಳ ಕಾಲ ಇರುವುದು ಮತ್ತು ಪ್ರತಿದಿನ ಎರಡೂವರೆ ಸಾವಿರ ದೋಸೆಗಳನ್ನು ಉಣಬಡಿಸುತ್ತಿರುವುದು ವೃತ್ತಿಪರತೆಯ ದಾಖಲೆಯೇ ಸರಿ’ ಎಂದರು.

ADVERTISEMENT

ಸಾಹಿತಿ ಕೆ.ಎಸ್‌.ನಿಸಾರ್‌ ಅಹಮದ್‌, ‘ಕಾಲೇಜು ದಿನಗಳಲ್ಲಿ ಕ್ರಿಕೆಟ್‌ ಪಂದ್ಯ ಆಡುವಾಗ ವಿದ್ಯಾರ್ಥಿ ಭವನದ ದೋಸೆ ತಿನ್ನಿಸುವ ಬೆಟ್ಟಿಂಗ್‌ ಕಟ್ಟುತ್ತಿದ್ದೆವು. ಈ ಭವನಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಎಂ.ಬಿ.ಸಿಂಗ್‌, ವೈಎನ್ಕೆ ಬರುತ್ತಿದ್ದರು. ಅಂತಹ ಮಹನೀಯರನ್ನು ಕಾಣುವ, ಮಾತನಾಡಿಸುವ ಅವಕಾಶ ಇಲ್ಲಿ ಇರುತ್ತಿತ್ತು’ ಎಂದು ನೆನಪು ಬಿಚ್ಚಿಟ್ಟರು.

‘ಸೆಂಟ್ರಲ್‌ ಕಾಲೇಜಿನಲ್ಲಿ ಭೂ ವಿಜ್ಞಾನದ ಆನರ್ಸ್‌ ಪದವಿ ಓದಲು ಬಂದಾಗ 1954ರಲ್ಲಿ ಮೊದಲ ಬಾರಿಗೆ ಇಲ್ಲಿ ದೋಸೆ ತಿಂದಿದ್ದೆ. ಮಲೆನಾಡಿನಲ್ಲಿ ಎಷ್ಟೇ ವಿವಿಧ ಮರಗಳಿದ್ದರೂ ಶ್ರೀಗಂಧಕ್ಕೆ ಸಮವಲ್ಲ, ಹಾಗೆಯೇ ನಗರದಲ್ಲಿ ಎಷ್ಟೇ ಹೋಟೆಲ್‌ಗಳಿದ್ದರೂ ವಿದ್ಯಾರ್ಥಿ ಭವನಕ್ಕೆ ಸಮವಲ್ಲ’ ಎಂದು ಶ್ಲಾಘಿಸಿದರು.

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ,‘ನಮ್ಮ ಕಂಪನಿಯು ಸಾಧನೆಯ ಮೈಲಿಗಲ್ಲೊಂದನ್ನು ತಲುಪಿದಾಗ, ಹಿರಿಯ ಸಹೋದ್ಯೊಗಿಗಳೊಂದಿಗೆ ಭವನದಲ್ಲಿ ದೋಸೆ ತಿನ್ನುವ ಮೂಲಕ ಸಂಭ್ರಮವನ್ನು ಬಹುತೇಕ ಬಾರಿ ಆಚರಿಸಿದ್ದೇವೆ. ಇಲ್ಲಿನ ಶುಚಿ, ರುಚಿ ಮತ್ತು ಗುಣಮಟ್ಟವೇ ಗ್ರಾಹಕರನ್ನು ಹಿಡಿದಿಟ್ಟಿದೆ’ ಎಂದರು.

ಅಮೃತ ಮಹೋತ್ಸವದ ಸ್ಮರಣೆಗಾಗಿ ‘ನೆನಪಿನಂಗಳ’ ಕಾಫಿ ಟೇಬಲ್‌ ಪುಸ್ತಕ ಹಾಗೂ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಹೋಟೆಲ್‌ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇನ್ನುಮುಂದೆ ಭವನಕ್ಕೆ ಬರುವ ಯೋಧರಿಗೆ ಉಚಿತವಾಗಿ ತಿಂಡಿಗಳನ್ನು ನೀಡುವುದಾಗಿ ಘೋಷಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.