ಬೆಂಗಳೂರು: ಒಂದೂವರೆ ವರ್ಷದಿಂದ ಶಾಲೆಗಳು ಹಾಗೂ ದೈಹಿಕ ಚಟುವಟಿಕೆಗಳಿಂದ ದೂರ ಉಳಿದ ನಗರದ ಮಕ್ಕಳಲ್ಲಿ ಮನೋವ್ಯಾಧಿ ಉಲ್ಭಣಿಸುತ್ತಿದೆ. ಅತಿಯಾದ ಸಿಟ್ಟು, ಹಠಮಾರಿತನದ ಮೂಲಕ ಮಕ್ಕಳು ಮನಸ್ಸಿನ ಒತ್ತಡವನ್ನು ಹೊರಹಾಕುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಮನೋವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಕಾಣಿಸಿಕೊಂಡ ಬಳಿಕ ಶಾಲಾ–ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಮುಚ್ಚಿದ್ದವು. ಕೋವಿಡ್ ಮೊದಲನೇ ಅಲೆ ನಿಯಂತ್ರಣಕ್ಕೆ ಬಂದು, ಪರಿಸ್ಥಿತಿ ತಿಳಿಗೊಳ್ಳುವ ಹೊತ್ತಿಗೆ ಎರಡನೇ ಅಲೆ ಕಾಣಿಸಿಕೊಂಡಿತ್ತು. ಈ ಬಾರಿ ಮಾರ್ಚ್ ಮೂರನೇ ವಾರದ ಬಳಿಕ ಸೋಂಕು ಪತ್ತೆ ದರ ಏರುಗತಿಯಲ್ಲೇ ಸಾಗಿತ್ತು. ಈ ಸಂದರ್ಭದಲ್ಲಿ ಮುಚ್ಚಿದ್ದ ಶಾಲಾ–ಕಾಲೇಜುಗಳ ಬಾಗಿಲು ಇನ್ನೂ ತೆರೆದಿಲ್ಲ.
ದಿನದ ಬಹುತೇಕ ಸಮಯವನ್ನು ಮಕ್ಕಳು ಮನೆಯೊಳಗಡೆಯೇ ಕಳೆಯುತ್ತಿರುವ ಪರಿಣಾಮ ಅವರಲ್ಲಿ ಮನೋರೋಗಗಳು ಕೋವಿಡ್ ಪೂರ್ವದ ಸ್ಥಿತಿಗೆ ಹೊಲಿಸಿದರೆ ಶೇ 20ರಷ್ಟು ಹೆಚ್ಚಳವಾಗಿದೆ ಎಂದು ನಿಮ್ಹಾನ್ಸ್ ವೈದ್ಯರು ಹೊರರೋಗಿ ವಿಭಾಗದ ದಾಖಲಾತಿ ಆಧಾರದಲ್ಲಿ ವಿಶ್ಲೇಷಿಸಿದ್ದಾರೆ. ಸದ್ಯ ಪ್ರತಿನಿತ್ಯ ಸರಾಸರಿ 60ರಿಂದ 70 ಮಕ್ಕಳು ಹೊರರೋಗಿಗಳಾಗಿ ಭೇಟಿ ನೀಡುತ್ತಿದ್ದಾರೆ.
‘ಆನ್‌ಲೈನ್ ತರಗತಿಯ ಬಳಿಕವೂ ದಿನವಿಡೀ ಸ್ಮಾರ್ಟ್‌ಫೋನ್‌ಗಳು,ಟ್ಯಾಬ್ಲೆಟ್‌ಗಳನ್ನು ಬಳಕೆ ಮಾಡುವುದರಿಂದ ಅವರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಿರಂತರ ಒಂದು ಗಂಟೆಗಿಂತ ಹೆಚ್ಚು ಅವಧಿ ಈ ಸಾಧನಗಳನ್ನು ಬಳಸುವ ಮಕ್ಕಳು ಮಾನಸಿಕ ಉದ್ವೇಗ, ಖಿನ್ನತೆಗೆ ತುತ್ತಾಗುತ್ತಿದ್ದಾರೆ. ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಈ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ‘ತಂತ್ರಜ್ಞಾನದ ವ್ಯಸನ’ ಎಂದು ಕರೆಯಲಾಗುತ್ತದೆ’ ಎಂದು ಮನೋವೈದ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.
ನಡವಳಿಕೆ ಬದಲು: ‘ಚಟುವಟಿಕೆಗಳು ಇರದ ಕಾರಣ ಮಕ್ಕಳಲ್ಲಿ ಖಿನ್ನತೆ ಕಾಣಸಿಕೊಳ್ಳುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಸ್ಥೆಗೆ ಪ್ರತಿನಿತ್ಯ ಸರಾಸರಿ 600 ಮಂದಿ ಹೊರ ರೋಗಿಗಳು ಬರುತ್ತಿದ್ದರು. ಆ ಸಂಖ್ಯೆ ಈಗ 1,400ಕ್ಕೆ ಏರಿಕೆಯಾಗಿದೆ. ಇವರಲ್ಲಿ ಮಕ್ಕಳು ಹಾಗೂ ಯುವಜನರ ಸಂಖ್ಯೆಯೇ ಹೆಚ್ಚು ಇದೆ’ ಎಂದು ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ. ಶಶಿಧರ್ ಎಚ್.ಎನ್. ತಿಳಿಸಿದರು.
‘ಮಕ್ಕಳ ನಡವಳಿಕೆಯನ್ನು ಪಾಲಕರು ಗಮನಿಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಸಮಸ್ಯೆ ಭವಿಷ್ಯದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಗರಿಷ್ಠ ಪ್ರಮಾಣದಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪು ಒಳಗೊಂಡ ಅಪೌಷ್ಟಿಕ (ಜಂಕ್ ಫುಡ್) ಆಹಾರ ಸೇವನೆಗೆ ಕಡಿವಾಣ ಹಾಕಬೇಕು. ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.
‘ಮಕ್ಕಳ ಕಲಿಕೆಗೆ ತೊಡಕು’
‘ಕೋವಿಡ್ ಕಾಣಿಸಿಕೊಂಡ ಬಳಿಕ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾದ ಕಾರಣ ಎಲ್ಲ ವಯೋಮಾನದವರಲ್ಲಿಯೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳು ಬಹಿರಂಗವಾಗಿ ಹೇಳಿಕೊಳ್ಳದ ಕಾರಣ ನಡವಳಿಕೆಯ ಆಧಾರದಲ್ಲಿ ಸಮಸ್ಯೆಗಳನ್ನು ಗುರುತಿಸಬೇಕಾಗುತ್ತದೆ. ನಗರ ಪ್ರದೇಶದ ಮಕ್ಕಳು ಮೊದಲಿನಿಂದಲೂ ಮೊಬೈಲ್ ಬಳಸುತ್ತಿದ್ದುದು ಹೆಚ್ಚು. ಅದು ಈಗ ಮತ್ತಷ್ಟು ಜಾಸ್ತಿಯಾಗಿದೆ. ಇದು ಕಲಿಕೆಯ ಮೇಲೆ ಪರಿಣಾಮ ಬೀರಲಿದೆ. ಮಕ್ಕಳು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆಗಳು ಇರುತ್ತವೆ’ ಎಂದು ಮಕ್ಕಳು ಹಾಗೂ ಹದಿಹರೆಯದವರ ಮನೋರೋಗ ತಜ್ಞ ಡಾ.ಕೆ.ಎಂ. ರಾಜೇಂದ್ರ ತಿಳಿಸಿದರು.
‘ಮೊಬೈಲ್ ಗೇಮ್‌ಗಳನ್ನು ಅತಿಯಾಗಿ ಆಡುವುದರಿಂದ ಕೂಡ ಮನೋರೋಗಗಳು ಬರುತ್ತವೆ. ದೈಹಿಕ ಚಟುವಟಿಕೆ ಇರದ ಕಾರಣ ಕೆಲ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯೂ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಶಾಲೆಗಳು ಪ್ರಾರಂಭವಾದ ಬಳಿಕ ಹಳೆಯ ವ್ಯವಸ್ಥೆಗೆ ಹೊಂದಿಕೊಳ್ಳಲು ಅವರಿಗೆ ಸಮಯಬೇಕಾಗುತ್ತದೆ. ಮನೆಯಲ್ಲಿ ಮಕ್ಕಳು ಯೋಗ ಹಾಗೂ ಸಮಯ ನಿರ್ವಹಣೆಗೆ ಆದ್ಯತೆ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.