ಬೆಂಗಳೂರು: ‘ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವ ಅಗತ್ಯವಿದೆ’ ಎಂದು ಹೈಕೋರ್ಟ್ ಸಲಹೆ ನೀಡಿದೆ.
‘ಇಂತಹ ನೀತಿಯಿಂದ ವಿದ್ಯಾರ್ಥಿಗಳ ಜೀವನದಲ್ಲಿ ಎದುರಾಗಬಹುದಾದ ಗಂಭೀರ ಮತ್ತು ಹಾನಿಕಾರಕ ಪರಿಣಾಮಗಳನ್ನು ತಡೆಗಟ್ಟುವುದರ ಜತೆಗೆ, ಅವರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು ಸಹಾಯಕವಾಗುತ್ತದೆ’ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಂತೆಯೇ, ಈ ನೀತಿ ರೂಪಿಸುವ ಮತ್ತು ಅನುಷ್ಠಾನಗೊಳಿಸುವಲ್ಲಿ ಮುಂದಡಿ ಇರಿಸಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಕೈಗೊಂಡ ಕ್ರಮಗಳನ್ನು ನ್ಯಾಯಪೀಠ ಶ್ಲಾಘಿಸಿದೆ.
‘ನೀತಿ ನಿರೂಪಣೆಯ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಾಗಲೀ ಅಥವಾ ಸಂಬಂಧಿಸಿದ ವಿಶ್ವವಿದ್ಯಾಲಯ, ಇಲ್ಲವೇ ವಿಶ್ವವಿದ್ಯಾಲಯ ಅನುದಾನ ಆಯೋಗವಾಗಲೀ (ಯುಜಿಸಿ) ಯಾವುದೇ ನೀತಿ ರೂಪಿಸಿಲ್ಲ’ ಎಂಬ ಅಂಶವನ್ನು ಉಲ್ಲೇಖಿಸಿರುವ ನ್ಯಾಯಪೀಠ; ‘ಮಾನಸಿಕ ಆರೋಗ್ಯ ಮತ್ತು ತಾರತಮ್ಯ ವಿರೋಧಿ ನೀತಿ ರೂಪಿಸುವ ಜರೂರು ಇದೆ’ ಎಂದು ಹೇಳಿದೆ.
‘ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಮತ್ತು ಸಾಮಾಜಿಕವಾದ ಅಸಹಜ ನಡವಳಿಕೆಗಳು ವಿದ್ಯಾರ್ಥಿಯ ಕುಟುಂಬ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಸಮುದಾಯವನ್ನೂ ಒಳಗೊಂಡಂತೆ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ. ಹಾಗಾಗಿ, ಅಂತಹವರ ನಡವಳಿಕೆ ಕುರಿತು ಕಾಳಜಿ ಹೊಂದುವುದರ ಜತೆಗೆ, ಅವರೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸಬೇಕಾದ ಅನಿವಾರ್ಯತೆ ಇರುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ?: ‘ನನ್ನನ್ನು ಕಾಲೇಜಿನಿಂದ ಅಮಾನತುಗೊಳಿಸಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ರವಾನಿಸಿರುವ ಇ-ಮೇಲ್ ರದ್ದುಗೊಳಿಸಬೇಕು. ಇತರೆ ವಿದ್ಯಾರ್ಥಿಗಳಂತೆ ತರಗತಿಯಲ್ಲಿ ಕೂತು ಪಾಠ ಕೇಳಲು ಅವಕಾಶ ಕಲ್ಪಿಸಲು ನಿರ್ದೇಶಿಸಬೇಕು’ ಎಂದು ಕೋರಿ ಸ್ನಾತಕೋತ್ತರ ಪದವಿಯ ಪ್ರಥಮ ವರ್ಷದ ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಪೀಠ ಈ ನೀತಿ ಜಾರಿಗೆ ಬಂದಿರುವ ಬಗ್ಗೆ ನ್ಯಾಯಪೀಠ ಪ್ರಸ್ತಾಪಿಸಿದೆ.
‘ಮಾನಸಿಕ ಆರೋಗ್ಯ ನೀತಿಯು, ಎಲ್‌ಜಿಬಿಟಿಕ್ಯೂ+ ಎಂದು ಗುರುತಿಸಿಕೊಳ್ಳುವ ವಿದ್ಯಾರ್ಥಿಗಳು ಮತ್ತು ಅಂಗವಿಕಲ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ವಿಶ್ವವಿದ್ಯಾಲಯದಲ್ಲಿ ಮನ್ನಣೆ ಪಡೆದ ಕಾರ್ಯಕ್ರಮಗಳಲ್ಲಿ ನೋಂದಾಯಿಸಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.